

ಪೀಣ್ಯದಾಸರಹಳ್ಳಿ: ಹತ್ತು ವರ್ಷ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳ ಮಾಡಿದ್ದು, ಅದು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿವೆ. ಅಂದಿನ ಅಭಿವೃದ್ಧಿ ಕೆಲಸಗಳನ್ನು ಜನತೆ ಮೆಚ್ಚಿ ಈ ಬಾರಿ ನನ್ನನ್ನು ಗೆಲ್ಲಿಸುವ ವಿಶ್ವಾಸವಿದೆ ಎಂದು ದಾಸರಹಳ್ಳಿ ಬಿಜೆಪಿ ಅಭ್ಯರ್ಥಿ ಎಸ್. ಮುನಿರಾಜು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಸುಂಕದಕಟ್ಟೆ ವಾರ್ಡ್‌ನ ಹೊಯ್ಸಳ ನಗರದ ಅಯ್ಯಪ್ಪ ಸರ್ಕಲ್‌ನಿಂದ ರೋಡ್ ಶೋ ಮೂಲಕ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದರು.
ಕಳೆದ ಬಾರಿ ಜೆಡಿಎಸ್ ಕುತಂತ್ರದಿಂದ ಗೆದ್ದಿತ್ತು, ಆದರೆ ಈ ಬಾರಿ ದಾಸರಹಳ್ಳಿಯಲ್ಲಿ ಬಿಜೆಪಿ ಎನ್ನುವುದಕ್ಕೆ ಜನಾಶೀರ್ವಾದ ಯಾತ್ರೆಯ ಜನ ಬೆಂಬಲವೇ ಸಾಕ್ಷಿ. ಜನರ ಪಕ್ಷ ಬಿಜೆಪಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಅಭಿವೃದ್ಧಿಗಾಗಿ ಬಿಜೆಪಿ ಗೆಲ್ಲಿಸಲು ಜನರೇ ಹೆಜ್ಜೆಯಿಟ್ಟಿದ್ದಾರೆ ಎಂದರು.
ಮುನಿರಾಜು ಅವರು ಹೊಯ್ಸಳನಗರದ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಂತರ ಕ್ಯಾಲಿ ಮುಖಾಂತರ ಸೊಲ್ಲಾಪುರದಮ್ಮ ದೇವಸ್ಥಾನ, ಹೆಗ್ಗನಹಳ್ಳಿ ಕ್ರಾಸ್, ಶ್ರೀಗಂಧನಗರ, ಫ್ರೆಂಡ್ಸ್ ಕಾಲನಿ, ಹೆಗ್ಗನಹಳ್ಳಿ ಮುಖ್ಯರಸ್ತೆಯಲ್ಲಿ ಮತಯಾಚನೆ ಮಾಡಿದರು. ಹೆಗ್ಗನಹಳ್ಳಿ ವಾರ್ಡ್ ಅಧ್ಯಕ್ಷ ಸಪ್ತಗಿರಿ ಮಂಜುನಾಥ್, ಪಾಲಿಕೆ ಮಾಜಿ ಸದಸ್ಯ ಭಾಗ್ಯಮ್ಮ ಕೃಷ್ಣಯ್ಯ, ಮುಖಂಡರಾದ ಎಚ್.ಆರ್. ಪ್ರಕಾಶ್, ಸಪ್ತಗಿರಿ ಆನಂದ್, ಟೆಂಟ್ ಮಂಜಣ್ಣ, ಡಾ. ನಾಗೇಶ್, ಗುರು ನಿಶ್ಚಲ್ ಹಾಗೂ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.