ಸುಮಲತಾ ಎಫ್​ಬಿ ಪೋಸ್ಟ್​ಗೆ ನೆಟ್ಟಿಗರ ತೀವ್ರ ಆಕ್ರೋಶ: ಕೊನೆಗೂ ಎಚ್ಚೆತ್ತುಕೊಂಡು ಸಭೆ ಮಾಡಲಿದ್ದಾರೆ ಸಂಸದೆ!

Sumalatha Ambareesh
Published on

ಮಂಡ್ಯ: ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾದರೂ ಮಂಡ್ಯಕ್ಕೆ ಬಾರದ ಸಂಸದೆ ಸುಮಲತಾ ಅಂಬರೀಷ್​ ವಿರುದ್ಧ ಜನರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಂತೆಯೇ ಸಂಸದೆ ಕೊನೆಗೂ ಎಚ್ಚೆತ್ತುಕೊಂಡಿದ್ದಾರೆ.

ಕಳೆದ ನಾಲ್ಕು ದಿನ ಹಿಂದೆ ಮಂಡ್ಯದ ಗಂಟೇಗೌಡನದೊಡ್ಡಿ, ಗುಡುಗೇನಹಳ್ಳಿಯಲ್ಲಿ ನೂರಾರು ಎಕರೆ ಜಮೀನು ಜಲಾವೃತಗೊಂಡಿದೆ. ಶ್ರೀರಂಗಪಟ್ಟಣ, ನಾಗಮಂಗಲ ಹಾಗೂ ಮದ್ದೂರು ವ್ಯಾಪ್ತಿಯಲ್ಲಿಯೂ ಜಮೀನುಗಳಿಗೆ ನೀರು ನುಗ್ಗಿದೆ. ಜಿಲ್ಲೆಯಾದ್ಯಂತ ಮಳೆಯಿಂದ ಅದ್ವಾನವಾದ್ರು ಸ್ಥಳಕ್ಕೆ ಮಾತ್ರ ಸಂಸದೆ ಸುಮಲತಾ ಮಾತ್ರ ಸುಳಿದಿಲ್ಲ.

ಫೇಸ್​ಬುಕ್ ಮೂಲಕವೇ ಮಳೆ ಅವಾಂತರಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಪೋಸ್ಟ್ ಮಾಡಿ ಅಧಿಕಾರಿಗಳೊಂದಿಗೆ ಮಳೆ ಹಾಗೂ ಮಳೆಯಿಂದಾದ ಅನಾಹುತಗಳ ಬಗ್ಗೆ ಮಾಹಿತಿ ಪಡೆದಿದ್ದೇನೆ. ಸೂಕ್ತ ಕ್ರಮವಹಿಸುವಂತೆ ಸೂಚಿಸಿದ್ದೇನೆ. ಸರ್ಕಾರಕ್ಕೆ ರೈತರಿಗೆ ಶೀಘ್ರ ಪರಿಹಾರ ನೀಡುವಂತೆ ಮನವಿ ಮಾಡುವೆ ಎಂದು ಪೋಸ್ಟ್ ಮಾಡಿದ್ದರು. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮನೆಯಲ್ಲೇ ಕುಳಿತು ಫೇಸ್​ಬುಕ್ ಮುಖಾಂತರ ಮಳೆ ಅನಾಹುತ ವಿಡಿಯೋಗಳನ್ನು ಪೋಸ್ಟ್​ ಮಾಡುವ ಮೂಲಕ ವರ್ಕ್ ಫ್ರಮ್​ ಹೋಮ್​ ಮಾಡುತ್ತಿದ್ದೀರಾ ಎಂದು ಆಕ್ರೋಶ ಹೊರಹಾಕಲಾಗುತ್ತಿದೆ. ಮನೆಯಲ್ಲಿಯೇ ಕುಳಿತು ಮುಂದಿನ ಸಲ ಮತ ಯಾಚಿಸಿ ಸ್ವಾಭಿಮಾನಿ ಸಂಸದೆಯವರೇ ಎಂದು ಜನರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಇಷ್ಟೆಲ್ಲಾ ಆದ ಮೇಲೆ ಎಚ್ಚೆತ್ತುಕೊಂಡ ಸುಮಲತಾ, ಇದೀಗ ಅಧಿಕಾರಿಗಳ ಜತೆ ಸಭೆ ನಡೆಸಲು ಮುಂದಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಮಂಡ್ಯದ ಡಿಸಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಮಳೆ ಹಾನಿ ಕುರಿತು ಚರ್ಚಿಸಲು ತೀರ್ಮಾನಿಸಿದ್ದಾರೆ. ಮಳೆಯಿಂದ ಹಾನಿಯಾಗಿರುವ ಕೆರೆಗಳು ಹಾಗೂ ಬೆಳೆ ನಾಶದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net