

ಬೆಂಗಳೂರು: ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಬೆಂಗಳೂರಿನ ಹಲವು ಭಾಗಗಳು ಜಲಾವೃತಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಾನಿಗೀಡಾದ ಪ್ರದೇಶಗಳಿಗೆ ನಾಳೆ (ಗುರುವಾರ) ಭೇಟಿ ನೀಡಲಿದ್ದಾರೆ. ನಾಳೆ ಮಧ್ಯಾಹ್ನ 3.30ಕ್ಕೆ ಭೇಟಿ ನೀಡಿ ಸ್ಥಳದಲ್ಲಿಯೇ ಅಗತ್ಯ ಸೂಚನೆ ನೀಡುವುದಾಗಿ ಮುಖ್ಯಮಂತ್ರಿ ತಿಳಿಸಿದರು.
ಪ್ರವಾಹ ನಿಯಂತ್ರಣ ಹಾಗೂ ಪರಿಹಾರ ಕಾರ್ಯಗಳ ಕುರಿತು ಅವರು ಗೃಹ ಕಚೇರಿ ಇಂದು ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾಧ್ಯಮಗಳಿಗೆ ಈ ವಿಷಯವನ್ನು ತಿಳಿಸಿದರು.
ಬೆಂಗಳೂರು ನಗರದ ಬೊಮ್ಮನಹಳ್ಳಿ, ಮಹದೇವಪುರ ವಲಯಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಈ ಎರಡು ವಲಯಗಳಲ್ಲಿ ತೀವ್ರ ಸಮಸ್ಯೆ ಇರುವ ಸ್ಥಳಗಳನ್ನು ಗುರುತಿಸಲಾಗಿದೆ. ಕೆಲವು ಪ್ರಮುಖ ರಸ್ತೆಗಳಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗಿದೆ. ಮಹದೇವಪುರ ಮತ್ತು ಬೊಮ್ಮನಹಳ್ಳಿ ವಲಯಗಳಲ್ಲಿ ಬಹಳ ದೊಡ್ಡ ಪ್ರಮಾಣದ ಹಾನಿಯಾಗಿದೆ. ಓಆರ್ಆರ್ ರಸ್ತೆಯಲ್ಲಿ ನೀರು ನಿಂತು, ಕೆಳಗಿನ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿ, ಜನವಸತಿಗೆ ತೊಂದರೆಯಾಗಿದೆ. ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿದಾಗ, ಮಹದೇವಪುರ ವಲಯದಲ್ಲಿ 9 ಕಡೆ ಹಾಗೂ ಬೊಮ್ಮನಹಳ್ಳಿಯಲ್ಲಿ 11 ಕಡೆ ತೊಂದರೆಯಾಗಿದೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಹಲವು ಬಡಾವಣೆಗಳಲ್ಲಿ ನೀರು ನಿಂತಿದೆ. ಅಲ್ಲಿ ಚರಂಡಿಗಳ ವ್ಯವಸ್ಥೆ ಸರಿಯಿಲ್ಲ. ಬಡಾವಣೆಗಳ ಎದುರೇ ಚರಂಡಿ ಬಂದು ನಿಂತಿದೆ. ಅವುಗಳನ್ನು ತೆರವು ಮಾಡಿ ನೀರಿಗೆ ತನ್ನದೇ ಸಹಜ ಮಾರ್ಗಗಳನ್ನು ಸರಿ ಪಡಿಸಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಬೊಮ್ಮನಹಳ್ಳಿಯಲ್ಲಿಯೂ ಕೆಲಸ ಪ್ರಾರಂಭವಾಗಿದ್ದು, ನೀರು ನಿಂತಿರುವಲ್ಲಿ ನೀರು ಹೊರಹಾಕಲು ಸೂಚಿಸಲಾಗಿದೆ. 125ಕ್ಕಿಂತ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಅವರಿಗೆ ಪರಿಹಾರ ನೀಡಲು ಕಂದಾಯ ಸಚಿವರು ಸಿದ್ಧತೆ ಮಾಡಿಕೊಂಡಿರುವುದಾಗಿ ಸಿಎಂ ತಿಳಿಸಿದರು.
1500 ಕೋಟಿ ರೂ.ಗಳನ್ನು ರಾಜಕಾಲುವೆ ನಿರ್ಮಾಣ ಕಾರ್ಯಕ್ಕೆ ನೀಡಲಾಗಿದ್ದು, ಅವುಗಳ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕಾಮಗಾರಿಗಳು ಪ್ರಾರಂಭವಾಗಬೇಕು. ಕಳೆದ 6 ತಿಂಗಳಿಂದ ನಿರಂತರವಾಗಿ ಮಳೆ ಬಂದದ್ದರಿಂದ ಸಮಸ್ಯೆಯಾಗಿದೆ. ಕಳೆದ 3 ತಿಂಗಳಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಈ ತಿಂಗಳು ಹಾಗೂ ಈ ವಾರ ಅತಿ ಹೆಚ್ಚು ಮಳೆಯಾಗಿದ್ದರಿಂದ ಎಲ್ಲಾ ಕೆರೆ ಕಟ್ಟೆಗಳು ತುಂಬಿವೆ. ತುಂಬಿರುವ ನೀರು ಹಾಗೂ ಮಳೆ ನೀರು ಇಷ್ಟು ಅನಾಹುತಕ್ಕೆ ಕಾರಣವಾಗಿದೆ. ಹಿಂದೆಂದೂ ಈ ಪರಿಸ್ಥಿತಿ ಇರಲಿಲ್ಲ. ಕಳೆದ ಬಾರಿ ಯಲಹಂಕ, ಮಲ್ಲೇಶ್ವರ ಭಾಗದಲ್ಲಿ ಆಗಿದ್ದ ತೊಂದರೆ ಸರಿಪಡಿಸಿದ್ದರಿಂದ ಈ ಬಾರಿ ಸಮಸ್ಯೆಯಾಗಿಲ್ಲ. ಹಿಂದೆ ಈ ಭಾಗದಲ್ಲಿ ಕೆರೆಗಳು ತುಂಬಿದ್ದರಿಂದ ಸಮಸ್ಯೆಯಾಗಿದೆ. ಬರುವ ದಿನಗಳಲ್ಲಿ ಎಲ್ಲಾ ಅಡೆತಡೆ ನಿವಾರಿಸಲು ಸೂಚನೆ ನೀಡಲಾಗಿದೆ ಎಂದರು.
ಹೆಚ್ಚುವರಿ ಅನುದಾನ ಅಗತ್ಯವಿದ್ದರೆ, ಅನುದಾನ ಬಿಡುಗಡೆ ಮಾಡಲಾಗುವುದು. ನಾಳೆ ಪರೀಕ್ಷೆ ಮಾಡಿ ಸ್ಥಳದಲ್ಲಿಯೇ ಸೂಚನೆ ನೀಡಲಾಗುವುದು. ಕೆ.ಆರ್.ಪುರದಲ್ಲಿ ರೈಲ್ವೆ ಅನುಮತಿ ಪಡೆದು ಟೆಂಡರ್ ಕರೆದು ಕೆಲಸ ಪ್ರಾರಂಭವಾಗುತ್ತಿದೆ. ಹೊಸಕೆರೆಹಳ್ಳಿಯಲ್ಲಿಯೂ ಕೆಲಸ ಪ್ರಾರಂಭವಾಗಿದೆ. ಆಡಳಿತಾತ್ಮಕ ಅನುಮೋಡನೆಗಳನ್ನು ನೀಡಿ, ಅನುದಾನ ಬಿಡುಗಡೆಯೂ ಆಗಿದೆ. ಬೆಳ್ಳಂದೂರು ಇಕೋ ಸ್ಪೇಸ್ ಹಾಗೂ ಆರ್ಎಂಝಡ್ ಪ್ರದೇಶಗಳಲ್ಲಿ ನೀರು ಸಂಗ್ರಹವನ್ನು ತೆರವುಗೊಳಿಸಲು ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು. ರೇನ್ಬೋ ಲೇಔಟ್ನಲ್ಲಿ ನೀರು ತೆಗೆದು, ಮಳೆನೀರುಗಾಲುವೆ ಕಾಮಗಾರಿ ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.