

ಚಿಕ್ಕಮಗಳೂರು: ಕಂದಾಯ ಸಚಿವ ಆರ್. ಅಶೋಕ್ ಅವರ ಆಪ್ತ ಕಾರ್ಯದರ್ಶಿ ಗಂಗಾಧರ್ ಅವರ ವಿರುದ್ಧ ಲಂಚ ಆರೋಪ ಕೇಳಿಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜ್ ಅವರು ಗಂಗಾಧರ್ ವಿರುದ್ಧ ಆರೋಪ ಮಾಡಿದ್ದು, ಅದಿನ್ನೂ ತನಿಖಾ ಹಂತದಲ್ಲಿದೆ.
ಈ ನಡುವೆಯೇ ಅಶೋಕ್ ಅವರು, ತಮ್ಮ ಆಪ್ತ ಕಾರ್ಯದರ್ಶಿ ಹುದ್ದೆಯಿಂದ ಗಂಗಾಧರ್ ಅವರನ್ನು ತೆಗೆದುಹಾಕಿರುವುದಾಗಿ ತಿಳಿದುಬಂದಿದೆ. ಅವರು ಈಗ ಪುನಃ ತಮ್ಮ ಮೊದಲಿನ ಸ್ಥಾನವಾದ ವಿಧಾನಸಭೆಯ ಸಚಿವಾಲಯದ ನೌಕರ ಕೆಲಸಕ್ಕೆ ಮತ್ತೆ ವಾಪಾಸ್ ಆಗಲಿದ್ದಾರೆ ಎನ್ನಲಾಗಿದೆ.
ಲಂಚ ಕೇಳಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಆಡಿಯೋ ಇದೆ ಎಂದಿದ್ದ ಚೆಲುವರಾಜ್ ಅವರು, ಈ ಕುರಿತು ಶೃಂಗೇರಿ ಠಾಣೆಗೆ ನಿನ್ನೆ ದೂರು ನೀಡಿದ್ದರು.
ಚೆಲುವರಾಜ್ ಅವರ ಆರೋಪವೇನು?:
ಇದೇ 24ರಂದು ಅಶೋಕ್ ಅವರು ಚಿಕ್ಕಮಗಳೂರಿನ ಪ್ರವಾಸದಲ್ಲಿ ಇದ್ದರು. ಆಗ ನಾನು ಸಚಿವ ಅಶೋಕ್ ಅವರ ಪಿಎ ಗಂಗಾಧರ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬರು ನನಗೆ ಕರೆ ಮಾಡಿ ಸಚಿವರು ಬರುವ ವಿಷಯ ತಿಳಿಸಿದ್ದರು. ಆದ್ದರಿಂದ ನಾನು ಶೃಂಗೇರಿಯ ಆದಿಚುಂಚನಗಿರಿ ಸಭಾ ಭವನಕ್ಕೆ ಹೋಗಿದ್ದೆ. ಶೃಂಗೇರಿಗೆ ಬಂದಾಗ ಪೊಲೀಸರೂ ಆ ವ್ಯಕ್ತಿಯನ್ನು ಕಂದಾಯ ಸಚಿವರ ಪಿಎ ಎಂದು ಪರಿಚಯಿಸಿದ್ದರು. ಆದರೆ ಅವರನ್ನು ನಾನು ಮೊದಲು ನೋಡಿರದ ಕಾರಣ, ಅವರನ್ನು ಸಚಿವರ ಪಿಎ ಎಂದುಕೊಂಡಿದ್ದೇನೆ ಎಂದು ಚೆಲುವರಾಜ್ ಹೇಳಿದ್ದಾರೆ.
ಹೀಗೆ ಬಂದ ಸಮಯದಲ್ಲಿ, ಒಂದು ಫೈಲ್‌ಗೆ ಸಂಬಂಧಿಸಿದಂತೆ ಅವರು ನನ್ನನ್ನು ಒಂದು ಕಡೆ ಕರೆದುಕೊಂಡು ಹೋಗಿ ಲಂಚ ಕೊಡಲು ಹೇಳಿದರು. ಆದರೆ ನಾನು ಒಪ್ಪಲಿಲ್ಲ ಎಂದು ಚೆಲುವರಾಜ್ ಹೇಳಿದ್ದು, ಇವರು ನಿಜವಾಗಿಯೂ ಕಂದಾಯ ಸಚಿವರ ಪಿಎ ಹೌದಾ ಅಥವಾ ಬೇರೆಯವರೋ ಗೊತ್ತಿಲ್ಲ ಎಂದೂ ಸ್ಪಷ್ಟಪಡಿಸಿದ್ದಾರೆ. ಆದರೆ ಸದ್ಯ ಅಶೋಕ್ ಅವರು ಹುದ್ದೆಯಿಂದ ತೆಗೆದುಹಾಕಿದ್ದಾರೆ.