

ಬೆಂಗಳೂರು: ಕರೊನಾ ವ್ಯಾಪಕವಾಗಿರುವುದರಿಂದ ಪರಿಸ್ಥಿತಿ ನಿಯಂತ್ರಣಕ್ಕೆ ಬರುವವರೆಗೆ ರಾಜ್ಯದಲ್ಲಿ ಮದುವೆ ಸೇರಿದಂತೆ ಒಳಾಂಗಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರ ಸಂಖ್ಯೆಗೆ ಸರ್ಕಾರ ಮಿತಿ ಹಾಕಿದೆ.
ಈ ಮೂಲಕ ಮದುವೆಗೆ ಸದ್ಯ ಎಲ್ಲಾ ಬಳಗದವರನ್ನು ಕರಿಯಬಹುದು ಎಂದುಕೊಂಡವರಿಗೆ ಶಾಕ್ ಆಗಿದೆ.
ಈವರೆಗೆ ಒಳಾಂಗಣ ಕಾರ್ಯಕ್ರಮದಲ್ಲಿ ಇನ್ನೂರರ ಮಿತಿ ಇತ್ತು. ಇನ್ನು ಮುಂದೆ ನೂರರ ಮಿತಿ ಹಾಕಲಾಗಿದೆ. ನೂರಕ್ಕಿಂತ ಹೆಚ್ಚು ಜನ ಸೇರಲು ಅವಕಾಶ ಕೊಡಲ್ಲ. ಹೊರಾಂಗಣ ಕಾರ್ಯಕ್ರಮವಾದರೆ ಮಿತಿಯನ್ನು ಮುನ್ನೂರಕ್ಕೆ ಮಿತಿಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಅನಗತ್ಯ ಗುಂಪು ಸೇರಲು ಅವಕಾಶ ಕೊಡಲ್ಲ. ಯಾರೂ ಸಹ ಗುಂಪು ಸೇರಲು ಮುಂದಾಗಬೇಡಿ ಎಂದ ಮನವಿ ಮಾಡುವೆ ಎಂದ ಅವರು ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆಯೇ ಕ್ರಮಕೈಗೊಳ್ಳಲಾಗುತ್ತಿದೆ. ಕರೊನಾ ಚಿಕಿತ್ಸೆಗೆ ಔಷಧಿ ಕೊರತೆ ಇಲ್ಲದಂತೆ ಕ್ರಮಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಆಕ್ಸಿಜನ್ ಉತ್ಪಾದನೆಗೆ ಕ್ರಮಕೈಗೊಳ್ಳಲಾಗುತ್ತಿದೆ. ಟೆಂಡರ್ ಪ್ರಕ್ರಿಯೆ ನಡೆಯಲಿದ್ದು, ಶೀಘ್ರವೇ ಕಾರ್ಯಾರಂಭ ಮಾಡಲಾಗುತ್ತದೆ ಎಂದರು.
ಸಂಪುಟದ ಎಲ್ಲ ಸದಸ್ಯರೂ ಸಹ ಕರೊನಾ ನಿಯಂತ್ರಣಕ್ಕೆ ಕ್ರಮಕೈಗೊಳ್ಳುತ್ತಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಬಿಎಸ್ ವೈ ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದರು.