

ಬೆಂಗಳೂರು: ಅಸಾನಿ ಚಂಡಮಾರುತ ತೇವಾಂಶ ಭರಿತ ಮೋಡಗಳನ್ನು ಸೆಳೆದುಕೊಂಡಿದ್ದ ಪರಿಣಾಮ ವಾಡಿಕೆಗಿಂತ ಮುನ್ನವೇ ಈ ಬಾರಿ ಕೇರಳಕ್ಕೆ ಪ್ರವೇಶಿಸಬೇಕಿದ್ದ ನೈಋತ್ಯ ಮಾನ್ಸೂನ್ ಮಾರುತಗಳು ತುಸು ವಿಳಂಬವಾಗಲಿದೆ.
ಮುಂದಿನ 2-3 ದಿನಗಳಲ್ಲಿ ಮುಂಗಾರು ಸೃಷ್ಟಿಗೆ ಪೂರಕ ವಾತಾವರಣ ಉಂಟಾಗಿದೆ. ಮೇ 31ರ ನಂತರ ಕೇರಳಕ್ಕೆ ಪ್ರವೇಶಿಸುವ ಹೆಚ್ಚಿನ ಸಾಧ್ಯತೆಯಿದೆ. ನಂತರ ಮಾರುತಗಳು ಪ್ರಬಲವಾದರೆ ಒಂದರೆಡು ದಿನಗಳಲ್ಲಿ ರಾಜ್ಯಕ್ಕೆ ಪ್ರವೇಶಿಸಲಿದೆ. ಒಂದು ವೇಳೆ ದುರ್ಬಲಗೊಂಡರೆ ವಿಳಂಬವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮೂನ್ಸೂಚನೆ ನೀಡಿದೆ. ಕಳೆದ ವಾರ ಇಲಾಖೆಯು ದಕ್ಷಿಣ ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಹಾಗೂ ಬಂಗಾಳಕೊಲ್ಲಿಯಲ್ಲಿ ಮುಂಗಾರು ಮಾರುತಗಳ ಸೃಷ್ಟಿಗೆ ಪೂರಕ ವಾತಾವರಣ ಉಂಟಾಗಿದ್ದು, ಮೇ 27ರಂದು ಕೇರಳಕ್ಕೆ ಮಾರುತಗಳು ಪ್ರವೇಶಿಸಲಿವೆ ಎಂದು ಹೇಳಿತ್ತು. ಆದರೆ, ಮಾರುತಗಳು ದುರ್ಬಲಗೊಂಡ ಕಾರಣಕ್ಕೆ ಮಾನ್ಸೂನ್ ವಿಳಂಬವಾಗಿದೆ. ಆದರೆ, ವಾಡಿಕೆಯಂತೆ ಕೇರಳಕ್ಕೆ ಮಾರುತಗಳು ಎಂಟ್ರಿ ಕೊಡಲಿವೆ ಎಂದು ಇಲಾಖೆ ಮಾಹಿತಿ ನೀಡಿದೆ.
2017ರಲ್ಲಿ ಮೇ 30, 2018ರಲ್ಲಿ ಮೇ 29, 2019ರಲ್ಲಿ ಜೂ 6, 2020ರಲ್ಲಿ ಜೂ 5 ಹಾಗೂ 2021ರಲ್ಲಿ ಮೇ 31ರಂದು ಕೇರಳಕ್ಕೆ ಮಾರುತಗಳು ಪ್ರವೇಶಿಸುವ ಬಗ್ಗೆ ಇಲಾಖೆ ಮುನ್ಸೂಚನೆ ನೀಡಿತ್ತು. 2017 ಮತ್ತು 2018ರಲ್ಲಿ ವಾಡಿಕೆಗಿಂತ ಮುನ್ನ, 2019ರಲ್ಲಿ ಜೂ. 8ರಂದು, 2020ರಲ್ಲಿ ಜೂ.1ರಂದು ಹಾಗೂ 2021ರಲ್ಲಿ ಜೂ.3ರಂದು ಮುಂಗಾರು ಮಾರುತಗಳು ಕೇರಳಕ್ಕೆ ಪ್ರವೇಶಿತ್ತು.
ಹವಾಮಾನ ಮೂನ್ಸೂಚನೆ ಪ್ರಕಾರ ಈ ಬಾರಿ ವಾಡಿಕೆಕ್ಕಿಂತ ಮುನ್ನವೇ ಕೇರಳ ಹಾಗೂ ಕರ್ನಾಟಕಕ್ಕೆ ಮಾರುತಗಳು ಪ್ರವೇಶಿಸುವ ನಿರೀಕ್ಷೆಯಿತ್ತು. ಆದರೆ, ಸೈಕ್ಲೋನ್ ಸಂಭವಿಸಿದ ಹಿನ್ನೆಲೆಯಲ್ಲಿ ವಾತಾವರಣದಲ್ಲಿ ಕೆಲ ಬದಲಾವಣೆ ಉಂಟಾಗಿದೆ. ಶೀಘ್ರದಲ್ಲೇ ಬಂಗಾಳಕೊಲ್ಲಿಯಲ್ಲಿ ಮಾರುತಗಳು ಪ್ರವೇಶಿಸುವ ಹವಾಗುಣ ಸೃಷ್ಟಿಯಾಗಲಿದೆ. ಈ ತಿಂಗಳಿನ ಕೊನೆಯ ದಿನದಂದು ಕೇರಳಕ್ಕೆ ಮಾರುತಗಳು ಪ್ರವೇಶಿಸಲಿವೆ ಎಂದು ಹವಾಮಾನ ತಜ್ಞ ಶ್ರೀನಿವಾಸರೆಡ್ಡಿ ಹೇಳಿದ್ದಾರೆ.