

ಮಂಗಳೂರು: ಮೀನುಗಾರಿಕೆಗೆ ತೆರಳಿದ್ದ ಬೋಟ್ ಮುಳುಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದಾರೆ. ಮೀನುಗಾರಿಕೆಗೆ ತೆರಳಿ ವಾಪಾಸಾಗುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ದೋಣಿಯಲ್ಲಿ 20 ಕ್ಕೂ ಹೆಚ್ಚು ಮೀನುಗಾರರಿದ್ದು, ದುರಂತದ ಸಂದರ್ಭದಲ್ಲಿ 16 ಮಂದಿ ಪಾರಾಗಿದ್ದಾರೆ. 16 ಮಂದಿ ಡಿಂಗಿಯಲ್ಲಿ ಕುಳಿತ ಕಾರಣ ಅವರು ಪಾರಾಗಲು ಸಹಾಯವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಬೋಳಾರದ ಶ್ರೀರಕ್ಷಾ ಎಂಬ ಹೆಸರಿನ ಬೋಟ್ ಇದಾಗಿದೆ. ಮಂಗಳೂರು ಮೀನುಗಾರಿಕಾ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಈ ಬೋಟ್, ಮೀನು ತುಂಬಿಸಿಕೊಂಡು ವಾಪಸ್ ಬರುವಾಗ ಮಗುಚಿದೆ ಎಂದು ವರದಿಯಾಗಿದೆ.
ಸದ್ಯ ಆರು ಮಂದಿ ಮೀನುಗಾರರು ನಾಪತ್ತೆಯಾಗಿದ್ದು, ಸ್ಥಳಕ್ಕೆ ಕರಾವಳಿ ರಕ್ಷಣಾ ಪಡೆ ಆಗಮಿಸಿದ್ದು, ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದೆ.
.