ಬೆಚ್ಚಿಬಿದ್ದ ಮಂಡ್ಯ: ದೇವಾಲಯದ ಆವರಣದಲ್ಲಿಯೇ ಅರ್ಚಕರು ಸೇರಿ ಮೂವರ ಕೊಲೆ!

mandya temple
Published on

ಮಂಡ್ಯ: ನಿನ್ನೆ ಮಧ್ಯರಾತ್ರಿ ಮಂಡ್ಯದ ಹೊರವಲಯದ ಶ್ರೀಅರ್ಕೇಶ್ವರ ದೇವಾಲಯದ ಆವರಣದಲ್ಲಿ ಮೂರು ಮಂದಿ ಕೊಲೆ ನಡೆದಿದ್ದು, ಇಡೀ ನಗರ ಬೆಚ್ಚಿ ಬಿದ್ದಿದೆ. ಇಂದು ನಸುಕಿನ ವೇಳೆ ಅರ್ಚಕರು ಬಂದಾಗ ಘಟನೆ ಬೆಳಕಿಗೆ ಬಂದಿದೆ.

ಶ್ರೀಅರ್ಕೇಶ್ವರ ದೇವಾಲಯದಲ್ಲಿ ಈ ಘಟನೆ ನಡೆದಿದೆ. ಗಣೇಶ, ಪ್ರಕಾಶ್​, ಆನಂದ್​ ಕೊಲೆಯಾದವರು. ಇದರಲ್ಲಿ ಇಬ್ಬರು ಅರ್ಚಕರು, ಒಬ್ಬ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು. ದೇಗುಲದ ಗೋಪುರ ಮುಖ್ಯದ್ವಾರದ ಸಮೀಪದಲ್ಲಿ ಪ್ರಾಂಗಣದಲ್ಲಿ ಮಲಗಿದ್ದವರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾಗಿದೆ.

ಇವರೆಲ್ಲರೂ ದೇವಾಲಯದ ಪ್ರಾಂಗಣದಲ್ಲಿ ಮಲಗಿದ್ದರು. ಸರದಿಯಂತೆ ಪ್ರಕಾಶ್(50) ಗಣೇಶ್(49) ಅವರು ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದು. ಆನಂದ್ ( 40) ಭದ್ರತಾ ಸಿಬ್ಬಂದಿಯಾಗಿದ್ದರು ಎಂದು ಹೇಳಲಾಗಿದೆ.

ಈ ಮೂವರು ಮಂದಿ ರಾತ್ರಿ ಗೋಪುರ ಮುಖ್ಯದ್ವಾರದ ಬಾಗಿಲಿನ ಚಿಲಕವನ್ನು ಒಳಗಿನಿಂದ ಹಾಕಿಕೊಂಡು ಮಲಗಿದ್ದರು. ಕಾಂಪೌಂಡ್ ಪಕ್ಕದಲ್ಲಿರುವ ಮರವನ್ನೇರಿ ದೇವಾಲಯದ ಒಳಗೆ ಪ್ರವೇಶಿಸಿರುವ ದರೋಡೆಕೋರರು ಮೊದಲು ಮೂವರನ್ನು ಕೊಲೆ ಮಾಡಿದ್ದಾರೆ.

ನಂತರ ದೇವಾಲಯದ ಹುಂಡಿಯನ್ನು ಎತ್ತಿಕೊಂಡು ಹೋಗಿ ಅದನ್ನು ಕಲ್ಯಾಣಿ ಸಮೀಪದ ಸ್ನಾನದ ಮನೆ ಬಳಿ ಬಿಸಾಕಿದ್ದಾರೆ. ಹುಂಡಿ ಹಣಕ್ಕಾಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಶುಕ್ರವಾರ ಮುಂಜಾನೆ ಬೇರೆ ಅರ್ಚಕರು ದೇವಾಲಯಕ್ಕೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಪೊಲೀಸರು ಶ್ವಾನದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net