ಗಂಡ-ಹೆಂಡ್ತಿ ಮಧ್ಯೆ ಜಗಳ ತಂದಿಟ್ಟ ಮ್ಯಾಗಿ! ಬಳ್ಳಾರಿ ಯುವಕನ ಕಷ್ಟ ನೋಡಲಾಗದೇ ಡಿವೋರ್ಸ್​ ಕೊಟ್ಟ ಕೋರ್ಟ್​

maggi
ಸಾಂದರ್ಭಿಕ ಚಿತ್ರ
Published on

ಬೆಂಗಳೂರು: ಇಂದಿನ ಹಲವು ಯುವತಿಯರಿಗೆ ಅಡುಗೆ ಮಾಡುವುದು ಎಂದರೆ ಸಹಿಸಿಕೊಳ್ಳಲು ಆಗದ ಮಾತು. ಅಬ್ಬಬ್ಬಾ ಎಂದರೆ ಮ್ಯಾಗಿ ಮಾಡುವುದನ್ನು ಮಾತ್ರ ಕಲಿತಿರುತ್ತಾರೆ. ಉಳಿದ ಯಾವುದೇ ಅಡುಗೆಯೂ ಅವರಿಗೆ ಬರುವುದೇ ಇಲ್ಲ. ಇಂಥದ್ದೇ ಒಬ್ಬಳು ಯುವತಿಯಿಂದ ಬೇಸತ್ತ ಗಂಡನೊಬ್ಬ ಪತ್ನಿಗೆ ವಿಚ್ಛೇದನ ನೀಡಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.

ಅಸಲಿಗೆ ಈ ಘಟನೆ ನಡೆದು ಕೆಲ ತಿಂಗಳುಗಳೇ ಕಳೆದುಹೋಗಿವೆ. ಆದರೆ ಹೆಣ್ಣುಮಕ್ಕಳು ಅಡುಗೆ ಕಲಿಯುವುದು ಎಷ್ಟು ಮಹತ್ವದ್ದು ಹಾಗೂ ಕ್ಷುಲ್ಲಕ ಕಾರಣಗಳಿಗೆ ಈಗೀಗ ವಿಚ್ಛೇದನಗಳು ಹೇಗೆಲ್ಲಾ ಹೆಚ್ಚಾಗುತ್ತಿವೆ ಎಂಬ ಬಗ್ಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅವರು ಇತ್ತೀಚೆಗೆ ಹೇಳಿರುವ ಘಟನೆ ಇದು.

ಇದು ಬಳ್ಳಾರಿಯ ದಂಪತಿಯ ಕಥೆ. ಇದರಲ್ಲಿ ಗಂಡ ಪತ್ನಿಯ ವಿರುದ್ಧ ಕೋರ್ಟ್​ಗೆ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದ. ಇದಕ್ಕೆ ಕಾರಣ ನೋಡಿದಾಗ ನ್ಯಾಯಾಧೀಶರು ಶಾಕ್​ ಆಗಿದ್ದರು. ಏಕೆಂದರೆ ಆತ ಅದರಲ್ಲಿ ಮ್ಯಾಗಿಯನ್ನು ಉಲ್ಲೇಖಿಸಿದ್ದ.

ತನ್ನ ಹೆಂಡತಿ ಪ್ರತಿದಿನ ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಮತ್ತು ರಾತ್ರಿಯ ಊಟಕ್ಕೆ ಮ್ಯಾಗಿಯನ್ನೇ ತಯಾರಿಸುತ್ತಾಳೆ. ಬೇರೆ ಯಾವುದೇ ಅಡುಗೆ ಅವಳಿಗೆ ಬರುವುದಿಲ್ಲ. ಇದರಿಂದ ನಾನು ಬೇಸತ್ತು ಹೋಗಿದ್ದೇನೆ. ಅವಳು ಪ್ರಾವಿಷನ್ ಸ್ಟೋರ್‌ನಿಂದ ಕೇವಲ ನೂಡಲ್ಸ್ ಅನ್ನು ಮಾತ್ರ ಖರೀದಿಸುತ್ತಾಳೆ. ಹೀಗೆಯೇ ಮುಂದುವರೆದರೆ ನನ್ನ ಇಡೀ ಜೀವನ ಹಾಳಾಗುತ್ತದೆ. ನನ್ನ ಆರೋಗ್ಯಕ್ಕೂ ಕುತ್ತು ಬರುತ್ತದೆ. ಇಂಥವಳ ಜತೆ ನಾನು ಬದುಕಲಾರೆ ಎಂದು ಗಂಡ ಡಿವೋರ್ಸ್​ಗೆ ಅರ್ಜಿ ಸಲ್ಲಿಸಿದ್ದ.

ಒಂದು ವೇಳೆ ಆಕೆಗೆ ಅಡುಗೆ ಬರುವುದಿಲ್ಲವಾದರೆ ನನಗೆ ಬೇಸರ ಇರಲಿಲ್ಲ. ಆದರೆ ಹೊಸ ಅಡುಗೆ ಕಲಿಯಲು ಆಕೆಗೆ ಯಾವುದೇ ರೀತಿಯಲ್ಲಿ ಇಷ್ಟವಿಲ್ಲ. ಮ್ಯಾಗಿ ಬಿಟ್ಟು ಏನೂ ಮಾಡುವುದಿಲ್ಲ ಎನ್ನುತ್ತಾಳೆ. ಕಲಿಯುವ ಆಸಕ್ತಿಯೂ ಇಲ್ಲ ಎಂದು ಅವಲತ್ತುಕೊಂಡಿದ್ದ.

ಇವರಿಬ್ಬರ ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್​ ಇಬ್ಬರಿಗೂ ಡಿವೋರ್ಸ್​ ನೀಡಿತ್ತು. ಇಬ್ಬರ ನಡುವೆ ಸಂಧಾನ ಕಷ್ಟವೆಂದು ಗೊತ್ತಾದ ಹಿನ್ನೆಲೆಯಲ್ಲಿ ವಿಚ್ಛೇದನದ ಆದೇಶ ಹೊರಡಿಸಿತ್ತು. ಈ ಪ್ರಕರಣಕ್ಕೆ ಮ್ಯಾಗಿ ಕೇಸ್ ಎಂದು ಹೆಸರಿಡಲಾಗಿದೆ ಎಂದು ನ್ಯಾಯಾಧೀಶ ರಘುನಾಥ್ ತಿಳಿಸಿದರು. ಅಂತೂ ಮ್ಯಾಗಿಯಿಂದಾಗಿ ಈ ದಂಪತಿ ಬೇರೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net