

ಬೆಂಗಳೂರು: 90ರ ದಶಕದಲ್ಲೇ ಬೆಂಗಳೂರು ನಗರವನ್ನು ಐಟಿ ಹಬ್ ಮಾಡುವ ಸಂಬಂಧ ಹಲವು ಕಾರ್ಯಕ್ರಮಗಳನ್ನು ಮಾಜಿ ಸಿಎಂ ಎಸ್. ಎಂ.ಕೃಷ್ಣ ರೂಪಿಸಿದ್ದರು ಎಂದು ಫಿಡಿಲಿಟಸ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಚ್ಚುತ್ಗೌಡ ಹೇಳಿದ್ದಾರೆ.
ಬನಶಂಕರಿಯ ಬ್ರಿಗೇಡ್ ಸಾಫ್ಟ್ವೇರ್ ಪಾರ್ಕ್ನಲ್ಲಿ ಬುಧವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಎಸ್.ಎಂ.ಕೃಷ್ಣ ಅವರ ಭಾವಚಿತ್ರಕ್ಕೆ ಪುಪ್ಪನಮನ ಸಲ್ಲಿಸಿ ಮಾತನಾಡಿದರು.
ಬ್ರಾಂಡ್ ಬೆಂಗಳೂರಿನ ಕನಸನ್ನು 90ರ ದಶಕದಲ್ಲೇ ಕಂಡಿದ್ದ ದೂರದೃಷ್ಟಿಯುಳ್ಳ ರಾಜಕಾರಣಿ. ಪ್ರತಿಭಾವಂತ ರಾಜಕಾರಣಿಯಾಗಿದ್ದ ಇವರ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಲಕ್ಷಾಂತರ ಐಟಿ ಉದ್ಯೋಗಿಗಳ ಕನಸು ನನಸು ಮಾಡಿರುವ ನಿಜವಾದ ಅಜಾತಶತ್ರು. ಅಧಿಕಾರದ ಅವಧಿಯಲ್ಲಿ ಜನಪ್ರಿಯ ಕಾರ್ಯಕ್ರಮಗಳನ್ನು ಜಾರಿಗೆ ತರುವ ಮೂಲಕ ರಾಜ್ಯದ ಅಭಿವೃದ್ಧಿಕ್ಕೆ ಭದ್ರ ಬುನಾದಿ ಹಾಕಿದವರು ಎಂದು ಬಣ್ಣಿಸಿದರು.
ಕಲಾವಿದ ರವಿ ಎಸ್.ಕೋಟೆಗದ್ದೆ ಅವರು ಎಸ್.ಎಂ.ಕೃಷ್ಣ ಅವರ ಚಿತ್ರ ರಚಿಸಿ ಗಮನ ಸೆಳೆದರು. ಕಂಪನಿಯ ನೂರಾರು ಉದ್ಯೋಗಿಗಳು ಪುಪ್ಪನಮನ ಸಲ್ಲಿಸಿ ಗೌರವ ಸೂಚಿಸಿದರು.