

ಕಲಬುರಗಿ: ಅನ್ಯ ಜಾತಿಯ ಯುವತಿಯನ್ನ ಪ್ರೀತಿಸಿ ಮದುವೆ ಹಿನ್ನೆಲೆಯಲ್ಲಿ ಯುವತಿಯ ಮನೆಯವರಿಂದ ಯುವಕನ ಮನೆಯವರ ಮೇಲೆ ಹಲ್ಲೆ ನಡೆದಿದ್ದು, ಘಟನೆಯಲ್ಲಿ ಯುವಕನ ತಂದೆ ಮೃತಪಟ್ಟಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಚಾಮನೂರ್ ಗ್ರಾಮದಲ್ಲಿ ನಡೆದಿದೆ.
ದಶರಥ್ ಪೂಜಾರಿ (60) ಮೃತಪಟ್ಟಿದ್ದಾರೆ. ತೀವ್ರ ಹಲ್ಲೆಗೆ ಒಳಗಾಗಿದ್ದ ಇವರು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃಪಟ್ಟಿದ್ದಾರೆ.
ಕೊಲೆಯಾದ ದಶರಥ ಪೂಜಾರಿ ಮಗ ಸುರ್ಯಕಾಂತ್ ಚಾಮನೂರ್ ಗ್ರಾಮದ ಸಂಗೀತಾ ಎನ್ನುವ ಯುವತಿಯನ್ನ ಪ್ರೀತಿಸಿ ಮದುವೆ ಮಾಡಿಕೊಂಡಿದ್ದ. ಮದುವೆಯ ಬಳಿಕ ಯುವತಿಯ ಮನೆಯವರಿಂದ ತೀವ್ರ ವಿರೋಧ ಉಂಟಾಗಿತ್ತು.
ಮದುವೆಯ ಬಳಿಕ ಚಾಮನೂರ್ ತೊರೆದು ನವದಂಪತಿ ಬೆಂಗಳೂರು ಸೇರಿದ್ದರು. ಒಂದು ವರ್ಷದ ಬಳಿಕ ಅವರು ಊರಿಗೆ ವಾಪಸಾಗಿದ್ದರು. ಈ ವೇಳೆ ಎರಡೂ ಕುಟುಂಬದ ಮಧ್ಯೆ ಗಲಾಟೆಯಾಗಿದೆ.
ಯುವತಿಯ ಮನೆಯವರು ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದರು. ಈ ಸಂದರ್ಭದಲ್ಲಿ ದಶರಥ ಅವರಿಗೆ ತೀವ್ರ ಗಾಯಗಳಾಗಿದ್ದವು. ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ. ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.