

ಉಡುಪಿ: ಪ್ರೀತಿಸುವ ನಾಟಕವಾಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಪ್ರೇಮಿ ಕೈಕೊಟ್ಟ ಹಿನ್ನೆಲೆಯಲ್ಲಿ ಉಡುಪಿಯ ಯುವತಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ. ಈ ಘಟನೆಯಿಂದ ಮತ್ತೆ ಲವ್ ಜಿಹಾದ್ ವಿವಾದ ಭುಗಿಲೆದ್ದಿದೆ.
ಉಪ್ಪಿನಕುದ್ರು ಗ್ರಾಮದ 25 ವರ್ಷದ ಹಿಂದೂ ಯುವತಿ ಕೋಟೇಶ್ವರದ ವಿವಾಹಿತ ಅಜೀಜ್ (32) ಎಂಬಾತನ ಬಲೆಗೆ ಬಿದ್ದಿದ್ದಾಳೆ. ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಇಸ್ಲಾಂ ಧರ್ಮಕ್ಕೆ ಮತಾಂತವಾಗುವಂತೆ ಒತ್ತಾಯಿಸಿ ಕೊನೆಗೆ ಕೈಕೊಟ್ಟಿದ್ದಾನೆ. ಮೂರು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿದ್ದ ಯುವತಿ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಪ್ರಾಣ ಬಿಟ್ಟಿದ್ದಾಳೆ.
ಅಜೀಜ್ ತಲೆಮರೆಸಿಕೊಂಡಿದ್ದು, ಇದನ್ನು ಹಿಂದೂ ಸಂಘಟನೆಗಳು ಲವ್ ಜಿಹಾದ್ ಪ್ರಕರಣ ಎಂದು ಆರೋಪಿಸಿವೆ.
ಘಟನೆ ವಿವರ: ಯುವತಿ ಮತ್ತು ಅಜೀಜ್ ಕಳೆದ ಐದು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ನಡುವೆ ದೈಹಿಕ ಸಂಪರ್ಕವೂ ನಡೆದಿದೆ. ಇಷ್ಟೆಲ್ಲಾ ಆದ ಮೇಲೆ ಯುವತಿಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಆಗುವಂತೆ ಅಜೀಜ್ ಒತ್ತಾಯ ಮಾಡಿದ್ದ ಎಂದು ಯುವತಿಯ ಸಹೋದರ ದೂರಿದ್ದಾರೆ.
ಶಿಲ್ಪಾಳನ್ನು ಪ್ರೀತಿಸುವ ನಾಟಕವಾಡಿ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಈ ಕೃತ್ಯಕ್ಕೆ ಅಜೀಜ್‍ನ ಹೆಂಡತಿ ಸಲ್ಮಾ ತನ್ನ ಗಂಡನಿಗೆ ಸಹಾಯ ಮಾಡಿದ್ದಾಳೆ ಎಂದು ಹಿಂದೂ ಸಂಘಟನೆಗಳು ಆರೋಪ ಮಾಡಿದೆ. ಇದೇ ಹಿನ್ನೆಲೆಯಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರು ಕುಂದಾಪುರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.