

ಬೆಂಗಳೂರು: ಕೆಎಸ್ಆರ್‌ಟಿಸಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅನೇಕ ಮಂದಿಯಿಂದ ಸುಮಾರು 15 ಕೋಟಿ ರೂಪಾಯಿ ಪಡೆದು ವಂಚಿಸಿರುವ ಖತರ್ನಾಕ್ ಮಾಜಿ ಉದ್ಯೋಗಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೆಎಸ್‌ಆರ್‌ಟಿಸಿಯಲ್ಲಿ ಚಾಲಕನಾಗಿದ್ದ ಮಂಜುನಾಥ್ ಸದ್ಯ ಪೊಲೀಸರ ಅತಿಥಿ. ಈತನ ನಡವಳಿಕೆ ಸರಿಯಿಲ್ಲದ ಕಾರಣ ಕೆಲಸದಿಂದ ವಜಾಗೊಳಿಸಲಾಗಿತ್ತು. ಈ ವೇಳೆ ಸುಮ್ಮನೇ ಕುಳಿತುಕೊಳ್ಳದ ಆತ, ಹಣ ಮಾಡುವ ಪ್ಲ್ಯಾನ್ ಮಾಡಿದ. ಕೆಎಸ್‌ಆರ್‌ಟಿಸಿಯಲ್ಲಿ ಉದ್ಯೋಗ ಪಡೆಯಲು ಕೆಲವರು ಎಷ್ಟು ದುಡ್ಡಾದರೂ ನೀಡಲು ಮುಂದಾಗುವುದು ಎಂಬುದನ್ನು ಆತ ತನ್ನ ಅಧಿಕಾರದ ದಿನಗಳಲ್ಲಿ ಅರಿತಿದ್ದ ಕಾರಣ, ಇದನ್ನೇ ಬಂಡವಾಳ ಮಾಡಿಕೊಳ್ಳಲು ಮುಂದಾದ.
ಹಗರಿಬೊಮ್ಮನಹಳ್ಳಿ ಮೂಲದ ಮಂಜುನಾಥ್ ತನ್ನ ಸ್ನೇಹಿತ ಅನಿಲ್‌ನ ಜತೆಗೂಡಿ ಉದ್ಯೋಗಾಕಾಂಕ್ಷಿಗಳಿಗೆ ಸ್ಕೆಚ್ ಹಾಕಿ ಕಾರ್ಯನಿರತನಾಗಿದ್ದ. ಇದುವರೆಗೆ 500ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ತನಗೆ ಕೆಎಸ್‌ಆರ್‌ಟಿಸಿಯಲ್ಲಿ ಅನೇಕ ಮಂದಿ ಪರಿಚಯವಿದ್ದು, ತನ್ನ ಶಿಫಾರಸು ಮಾಡಿದರೆ ಉದ್ಯೋಗ ಪಡೆಯಬಹುದು ಎಂದು ನಂಬಿಸಿದ್ದ ಈತ ಎಲ್ಲರಿಂದು ಸುಮಾರು 15 ಕೋಟಿ ರೂಪಾಯಿ ಪಡೆದಿದ್ದಾನೆ. ಈ ವಂಚನೆಗಾಗಿ ಈತ 100 ಕ್ಕೂ ಹೆಚ್ಚು ಸಿಮ್ ಮತ್ತು ಹತ್ತಾರು ಮೊಬೈಲ್ ಬಳಸಿದ್ದಾನೆ. ಪೊಲೀಸರ ಕೈಯಲ್ಲಿ ಸಿಕ್ಕಿಬೀಳಬಾರದು ಎಂದು ಹಲವಾರು ರೀತಿಯಲ್ಲಿ ಇಬ್ಬರೂ ಸೇರಿ ಪ್ಲ್ಯಾನ್ ಮಾಡಿದ್ದಾರೆ.
ಈತನ ಬಲೆಗೆ ಬಿದ್ದವರು ಹೆಚ್ಚಾಗಿ ಬಳ್ಳಾರಿ, ಗದಗ, ಚಿತ್ರದುರ್ಗ, ದಾವಣಗೆರೆ ಸುತ್ತಲಿನ ಜನರು. ಪೊಲೀಸರಿಗೆ ತಿಳಿಯಬಾರದು ಎಂದು ಕೆಲಸ ಕೊಡಿಸುವುದು ತಾನು ಎಂದು ಹೇಳುತ್ತಿದ್ದರೂ ದುಡ್ಡು ಮಾತ್ರ ಸ್ನೇಹಿತ ಅನಿಲ್‌ನ ಅಕೌಂಟ್‌ಗೆ ಹಾಕಿಸಿಕೊಳ್ಳುತ್ತಿದ್ದ. ಆದರೆ ಈತನ ಬಗ್ಗೆ ಗುಮಾನಿ ಬಂದಿದ್ದರಿಂದ ಕೆಲವರು ಪೊಲೀಸರಲ್ಲಿ ದೂರು ದಾಖಲ ಮಾಡಿದ್ದರು. ತನಿಖೆ ನಡೆಸಿದ ಪೊಲೀಸರು ಈತನ ಬಾಯಿ ಬಿಡಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ತನಿಖೆ ನಡೆಸಲಾಗಿದೆ.
ಇಂಥ ಜನರನ್ನು ಹಿಂದೆ ಮುಂದೆ ನೋಡದೇ ನಂಬಿಕೊಂಡು ಮೋಸಹೋಗಬೇಡಿ ಎಂದಿರುವ ಪೊಲೀಸರು ಇವರಿಬ್ಬರು ಸೇರಿ ಇನ್ನೆಷ್ಟು ಜನರಿಗೆ ವಂಚನೆ ಮಾಡಿದ್ದಾರೆ ಎನ್ನುವ ತನಿಖೆಯಲ್ಲಿ ತೊಡಗಿದ್ದಾರೆ.