

ಬೆಂಗಳೂರು: ಸಿನಿ ಪ್ರಿಯರು ಹಾಗೂ ನಟ ಯಶ್ ಅಭಿಮಾನಿಗಳು ಕೆಜಿಎಫ್ ಚಾಪ್ಟರ್-2 ಬಿಡುಗಡೆಗಾಗಿ ಕಾದು ಕುಳಿತಿದಿದ್ದಾರೆ. ಜುಲೈ.16ರಂದು ಚಿತ್ರ ಬಿಡುಗಡೆಯ ದಿನಾಂಕ ನಿಗದಿಯಾಗುತ್ತಿದ್ದಂತೆಯೇ, ಆ ದಿನ ಬರುವಿಕೆಗಾಗಿ ಕಾತರರಾಗಿದ್ದಾರೆ.
ಈ ಚಿತ್ರದ ಟೀಸರ್ನಿಂದಲೇ ಖುಷಿಯಾಗಿರುವ ಚಿತ್ರಪ್ರಿಯರು ಚಿತ್ರ ಯಾವಾಗ ತೆರೆಗೆ ಬರಲಿದೆ ಎಂದು ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ.
ಇದೀಗ ಯಶ್ ಅಭಿಮಾನಿಗಳು ಇಷ್ಟಕ್ಕೇ ನಿಲ್ಲದೇ, ಒಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಚಿತ್ರ ಬೇಡಿಕೆಯೊಂದನ್ನು ಅವರು ಸಲ್ಲಿಸಿದ್ದಾರೆ. ಚಿತ್ರ ಬಿಡುಗಡೆಯಾಗಲಿರುವ ದಿನ ಅಂದರೆ ಜುಲೈ 16ರಂದು ರಾಷ್ಟ್ರೀಯ ರಜಾದಿನ ಎಂದು ಘೋಷಿಸುವಂತೆ ಅಭಿಮಾನಿಗಳು ಮನವಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ಯಾಗ್ ಮಾಡಿ, ಪೋಸ್ಟ್ ಮಾಡಿರುವ ಅಭಿಮಾನಿಗಳು, ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಜೀ, ಯಶ್ ಅಭಿಮಾನಿಗಳ ಭಾವೋದ್ವೇಗವನ್ನು ಅರ್ಥ ಮಾಡಿಕೊಳ್ಳಿ. ನಮ್ಮ ಭಾವನೆಯನ್ನು ಅರ್ಥ ಮಾಡಿಕೊಂಡು, ಕೆಜಿಎಫ್ ಚಾಪ್ಟರ್ -2 ಬಿಡುಗಡೆಯ ದಿನವಾದ ಜುಲೈ 16ರಂದು ನ್ಯಾಷನಲ್ ಹಾಲಿಡೇ ಘೋಷಿಸುವಂತೆ ಮನವಿ ಮಾಡಿದ್ದಾರೆ.
ಈ ಟ್ವೀಟ್ ಈಗ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು, ಅನೇಕ ಅಭಿಮಾನಿಗಳು ಇದಕ್ಕೆ ಕಮೆಂಟ್ ಮಾಡಿ ರಜೆ ಬೇಕು ಎಂದು ಹೇಳುತ್ತಿದ್ದಾರೆ.
ಇಷ್ಟ ಮಾತ್ರವಲ್ಲದೇ, ಕೆಲವು ಯಶ್ ಅಭಿಮಾನಿಗಳು ಪ್ರಧಾನಿಯವರಿ ಪತ್ರ ಕೂಡ ಬರೆದಿದ್ದಾರೆ ಎನ್ನಲಾಗಿದೆ. ಅದರಲ್ಲಿ ಕೂಡ ಈ ದಿನವನ್ನು ರಾಷ್ಟ್ರೀಯ ರಜಾದಿನ ಎಂದು ಘೋಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.