ಕಾಮಗಾರಿಯಲ್ಲಿ 30% ಭ್ರಷ್ಟಾಚಾರ- ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್​ ಹಾಕಿ ಎಂದ ಮಾಜಿ ಸಚಿವ

katta
Published on

ಬೆಂಗಳೂರು: ಬೆಂಗಳೂರಿನ ಹೆಬ್ಬಾಳ ವಿಧಾನಸಭೆ ಕ್ಷೇತ್ರದಲ್ಲಿ ನಡೆದಿರುವ ಕಾಮಗಾರಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದ್ದು ಶಾಸಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದ ಕೊಳೆಗೇರಿ ಅಭಿವೃದ್ಧಿ ಮಂಡಳಿ ಹಕ್ಕು ಪತ್ರದಲ್ಲಿ ಫೋರ್ಜರಿ ಮಾಡಲಾಗಿದೆ. ಶಾಸಕರು ಅದರಲ್ಲಿ ತಮ್ಮ ಫೋಟೋ ಹಾಕಿಕೊಂಡಿದ್ದಾರೆ ಎಂದರು. ಅಭಿವೃದ್ಧಿ ಹೆಸರಿನಲ್ಲಿ ಅವ್ಯವಹಾರ, ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.

ಸುಳ್ಳ ಅಂದರೆ ಭೈರತಿ ಸುರೇಶ್ ನಾಲ್ಕು ವರ್ಷಗಳಲ್ಲಿ ಸಾಧನೆ ಶೂನ್ಯ. ಭ್ರಷ್ಟಾಚಾರ ಇಲ್ಲದೇ ಒಂದೇ ಒಂದು ಕಾಮಗಾರಿ ನಡೆದಿಲ್ಲ. ಅಧಿಕಾರಿಗಳಿಗೆ 30% ಪರ್ಸಂಟೇಜ್ ಕೊಡಬೇಕು. ಎಂಎಲ್ಎ ದುಡ್ಡು ಕೊಟ್ಟರೆ ಪೂಜೆಗೆ ಬರ್ತಾರೆ ಎಂದು ಗುತ್ತಿಗೆದಾರರೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಕಟ್ಟಾ ಆರೋಪಿಸಿದರು.

ರಾಧಾಕೃಷ್ಣ ವಾರ್ಡ್​ನಲ್ಲಿ 50 ಲಕ್ಷ ರೂಪಾಯಿ ಬಿಲ್ ಆಗಿದೆ.40% ಅಷ್ಟೇ ಕೆಲಸ ಆಗಿದೆ. 650 ಕೋಟಿ ರೂಪಾಯಿ ಕಾಮಗಾರಿಯಲ್ಲಿ ಕೇವಲ 40% ಅಷ್ಟೇ ಕೆಲಸ ಆಗಿದೆ. ಈ ಬಗ್ಗೆ ಎಸಿಬಿಯಿಂದ ತನಿಖೆ ಆಗಬೇಕು. ಕಮಿಷನರ್ ಇದರ ಮೇಲೆ ನಿಗಾ ವಹಿಸಬೇಕು. ಶಾಸಕರ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಈ ಬಗ್ಗೆ ಶೀಘ್ರದಲ್ಲೇ ಮುಖ್ಯಮಂತ್ರಿಗೆ ಮನವಿ ಮಾಡುವುದಾಗಿ ಕಟ್ಟಾ ತಿಳಿಸಿದರು.

ಪುರಾವೇ ಇಲ್ಲದೇ ನಾನು ಯಾವುದೇ ಮಾತನಾಡಿಲ್ಲ. ದಾಖಲೆ‌ ಕೊಟ್ಟು‌ ಮಾತಾಡುತ್ತೇನೆ. ನಾನು ಸುಮ್ನೆ ಇದ್ದರೂ ನಂಗೆ ಬೈರತಿ ಸುರೇಶ್ ಬೈತಾನೆ. ನಾನೇನು ಮಾಡಿದೀನಿ ಸ್ವಾಮಿ. ಸುಮ್ನೆ ನಂಗೆ ಬಾಯಿಗೆ ಬಂದ ಹಾಗೆ ಬೈತಾನೆ ಎಂದು ಕಟ್ಟಾ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net