

ಬೆಂಗಳೂರು: ಬ್ರಿಟಿಷರ ಕಾಲದಿಂದ ಆಂಗ್ಲ ಭಾಷೆಯಲ್ಲೇ ಇರುವ ಪೊಲೀಸ್ ಕವಾಯತು ಆದೇಶಗಳನ್ನು ಕನ್ನಡಕ್ಕೆ ಅನುವಾದ ಮಾಡಿ ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ಬಳಸುವಂತೆ ಸಿಎಂ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ.
ಕನ್ನಡದಲ್ಲಿ ಕವಾಯತು ಆದೇಶಗಳನ್ನು ಜಾರಿಗೊಳಿಸುವ ಕುರಿತು 2017 ರಿಂದಲೇ ಚರ್ಚೆ ನಡೆಸಿ ಈ ಬಗ್ಗೆ ಎಡಿಜಿಪಿ ದರ್ಜೆ ಅಧಿಕಾರಿ ನೇತೃತ್ವದಲ್ಲಿ ಸಮಿತಿ ರಚಿಸಿ ಕನ್ನಡಕ್ಕೆ ಅನುವಾದಕ್ಕೆ ಸೂಚಿಸಲಾಗಿದೆ. ಈಗಾಗಲೇ 2020ರ ನವೆಂಬರ್ 1 ರಿಂದ 2021ರ ನ.1 ರವರೆಗೆ ‘ಕನ್ನಡ ಕಾಯಕ’ ವರ್ಷವನ್ನಾಗಿ ಸರ್ಕಾರ ಆಚರಿಸುತ್ತಿದೆ. ಇದರ ನಡುವೆ ಈ ಬಾರಿಯ ರಾಜ್ಯೋತ್ಸವದ ವೇಳೆ ಕಾಯಕ ವರ್ಷದ ಸಮಾರೋಪ ಸಮಾರಂಭದಲ್ಲಿ ಕನ್ನಡದಲ್ಲಿ ಕವಾಯತು ಆದೇಶಗಳನ್ನು ಬಳಸುವ ಬಗ್ಗೆ ಸರ್ಕಾರ ೋಷಣೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.
ಕನ್ನಡಕ್ಕೆ ಕವಾಯತು ಆದೇಶಗಳನ್ನು ಅನುವಾದ ಆಗಬೇಕೆಂಬ ಪ್ರಯತ್ನ 1986ರಲ್ಲಿ ಪ್ರಯತ್ನ ನಡೆದಿತ್ತು. ಪ್ರಥಮ ಬಾರಿಗೆ ಬೆಳಗಾವಿ ಪೊಲೀಸ್ ಕಮಿಷನರೇಟ್‌ನಲ್ಲಿ 2016ರಲ್ಲಿ ರಾಜ್ಯೋತ್ಸವ ಸಂದರ್ಭದಲ್ಲಿ ಬಳಕೆ ಮಾಡಲಾಗಿದೆ. ಒಂದು ಕಾವಾಯತಿನಲ್ಲಿ ಅಂದಾಜು 30 ಆದೇಶಗಳು (ಕಮಾಂಡ್)ಬರಲಿದ್ದು, ಸರಿಸುಮಾರು 110ಕ್ಕೂ ಅಧಿಕ ಪದ ಬಳಕೆ ಮಾಡಲಾಗಿತ್ತು. ಅಂದರೇ ಕ್ವಿಕ್ ಮಾರ್ಚ್ ಬದಲು ಶೀಘ್ರ ನಡೆ, ಪರೇಡ್ ವಿಶ್ರಾಂ ಬದಲಿಗೆ ಪರೇಡ್ ವಿಶ್ರಾಂತಿ ಹೀಗೇ ಕನ್ನಡದಲ್ಲಿ ಕವಾಯತು ಆಜ್ಞೆಗಳನ್ನು ಬಳಸಲಾಗಿದೆ.
1986ರಲ್ಲಿ ಭಾರತೀಯ ಸೈನ್ಯದಲ್ಲಿ ಕವಾಯತು ಆದೇಶಗಳನ್ನು ಹಿಂದಿ ಭಾಷೆಗೆ ಭಾಷಾಂತರ ಮಾಡಲಾಯಿತು. ಆ ಸಮಯದಿಂದಲೇ ಕನ್ನಡಕ್ಕೂ ಅನುವಾದ ಮಾಡಬೇಕೆಂಬ ಪ್ರಯತ್ನಗಳು ನಡೆಯುತ್ತಿದ್ದವು. ಆದರೆ, ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಮುತುವರ್ಜಿ ವಹಿಸಿರುವ ಕಾರಣ ಕಾರ್ಯರೂಪಕ್ಕೆ ಬರುವ ಎಲ್ಲ ನಿರೀಕ್ಷೆಗಳು ಇವೆ.