ಅತ್ತ ಕಾಂಗ್ರೆಸ್‌ ಪಾದಯಾತ್ರೆ, ಇತ್ತ ಜೆಡಿಎಸ್‌ ಮುಖಂಡರ ಶಿವರಾತ್ರಿ ಯಾತ್ರೆ! ರಾಜಕೀಯದಲ್ಲಿ ಸಂಚಲನ...

1242480
Published on

ಚಾಮರಾಜನಗರ: ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಅತ್ತ ಪ್ರಜ್ವಲ್ ರೇವಣ್ಣ ಧರ್ಮಸ್ಥಳಕ್ಕೆ ಪಾದಯಾತ್ರೆ ಕೈಗೊಂಡಿದ್ದರೆ, ಇತ್ತ ಮಹದೇಶ್ವರ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಪಾದಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದ್ದಾರೆ.

ಸೋಮವಾರದಂದು (ಫೆ.28) ಚಾಮರಾಜನಗರ ತಾಲೂಕಿನ ತಾಳಬೆಟ್ಟದಿಂದ ನಿಖಿಲ್‌ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಳ್ಳಲಿದ್ದಾರೆ. 21 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಅವರು ತೆರಳಲಿದ್ದಾರೆ. ಈ ಸಂದರ್ಭದಲ್ಲಿ ಬೆಟ್ಟಗುಡ್ಡ ಹತ್ತಿ ಇಳಿದು ಮಾದಪ್ಪನ ದರ್ಶನ ಪಡೆಯಲಿದ್ದಾರೆ.

ಕಾಂಗ್ರೆಸ್‌ನ ಮೇಕೆದಾಟು ಪಾದಯಾತ್ರೆ ವೇಳೆಯಲ್ಲೇ ಪ್ರಜ್ವಲ್ ರೇವಣ್ಣ, ನಿಖಿಲ್ ಕುಮಾರಸ್ವಾಮಿ ಶಿವರಾತ್ರಿ ಪಾದಯಾತ್ರೆ ಕೈಗೊಂಡಿರುವುದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್ ಪಾದಯಾತ್ರೆಗೆ ಪರ್ಯಾಯವಾಗಿ ಜೆಡಿಎಸ್ ಯುವನಾಯಕರ ಶಿವರಾತ್ರಿ ಪಾದಯಾತ್ರೆ ಯಾಕೆ ಕೈಗೊಂಡಿದ್ದಾರೆ ಎಂಬ ಬಗ್ಗೆ ವಿವಿಧ ರೀತಿಯಲ್ಲಿ ಚರ್ಚೆಯಾಗುತ್ತಿದೆ.

ಪ್ರಜ್ವಲ್ ರೇವಣ್ಣ ಇದಾಗಲೇ ಹೊಳೆನರಸೀಪುರದಿಂದ ಧರ್ಮಸ್ಥಳದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಹೋಳೆನರಸಿಪುರದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿದ ನಂತರ ಹುಟ್ಟೂರು ಹರದನಹಳ್ಳಿಗೂ ಹೋಗಿ ಮನೆದೇವರಿಗೆ ಪೂಜೆ ನೆರವೇರಿಸಿದ್ದಾರು. ಇವರು ಹಾಸನ, ಆಲೂರು, ಸಕಲೇಶಪುರ, ಶಿರಾಡಿಘಾಟ್ ಮಾರ್ಗವಾಗಿ ಪಾದಯಾತ್ರೆ ಮಾಡುತ್ತಿದ್ದಾರೆ.

ಪಾದಯಾತ್ರೆ ಮೂಲಕವಾಗಿಯೇ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಪಡೆಯಲಿದ್ದಾರೆ. ಪಕ್ಷದ ಜಲಧಾರೆ ಸೇರಿದಂತೆ ಜನಪರ ಕಾರ್ಯಗಳಿಗೆ ಪಾದಯಾತ್ರೆ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net