ಸಿಡಿ ಲೇಡಿ ಹುಡುಕಿ ಹೊರಟ್ರು ಜಾರಕಿಹೊಳಿ- ಊರಿಗೆ ಬಂದ್ರೂ ಮನೆಗೆ ಬಂದಿಲ್ಲ: ಎಲ್ಲವೂ ನಿಗೂಢ!

jrakiholi
Published on

ಬೆಂಗಳೂರು: ಇದೀಗ ರಮೇಶ್‌ ಜಾರಕಿಹೊಳಿ ಮತ್ತು ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರ ನಡೆ ಕ್ಷಣಕ್ಷಣಕ್ಕೂ ಕುತೂಹಲ ತರುತ್ತಿದೆ.

ಇತ್ತ ದೆಹಲಿಯಿಂದ ಬಂದು ಎರಡು ದಿನ ಆದರೂ ಬೆಂಗಳೂರಿನ ನಿವಾಸಕ್ಕೆ ರಮೇಶ್ ಜಾರಕಿಹೊಳಿ ಬಾರದೇ ಇರುವುದು ಎಲ್ಲರಲ್ಲಿಯೂ ಕುತೂಹಲ ಮೂಡಿಸಿದ್ದು, ಈ ನಿಗೂಢ ನಡೆಯ ಬಗ್ಗೆ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆ ಶುರುವಾಗಿದೆ. ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಇಬ್ಬರೂ ಎರಡು ದಿನಗಳಿಂದ ಅಜ್ಞಾತ ಸ್ಥಳದಲ್ಲಿ ಇದ್ದು, ಗೌಪ್ಯವಾಗಿ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ತಲೆಯ ಮೇಲೆ ಸಿಡಿ ಕೇಸ್ ತೂಗುಕತ್ತಿ ತೇಲಾಡುತ್ತಿರುವ ಹಿನ್ನೆಲೆಯಲ್ಲಿ ಜಾರಕಿಹೊಳಿ ಸಹೋದರರು ಈ ಕುರಿತು ನಿರಂತರವಾಗಿ ಚರ್ಚೆ ಮಾಡುತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ ಸಿಡಿ ಕೇಸ್‌ಗೆ ಸಂಬಂಧಿಸಿದಂತೆ ರಮೇಶ್‌ ವಿರುದ್ಧ ದಾಖಲಾಗಿರುವ ದೂರಿನಲ್ಲಿ ಯಾವುದೂ ಹುರುಳು ಇಲ್ಲ ಎಂಬುದಾಗಿ ’ಬಿ’ ರಿಪೋರ್ಟ್‌ ಸಿದ್ಧಪಡಿಸಲು ಪೊಲೀಸರು ಹಿಂದೇಟು ಹಾಕಿರುವ ಹಿನ್ನೆಲೆಯಲ್ಲಿ, ಇದೀಗ ಈ ಪ್ರಕರಣ ಸಹೋದರರಿಗೆ ತಲೆನೋವಾಗಿ ಪರಿಣಮಿಸಿದೆ.

ಸಿಡಿ ಲೇಡಿ ಹಾಕಿರುವ ಕೇಸ್ ಹಾಗೂ ಅದಕ್ಕೆ ಪ್ರತಿಯಾಗಿ ಸಲ್ಲಿಸಿರುವ ದೂರುಗಳನ್ನು ವಾಪಸ್‌ ಪಡೆಯಲು ಸರ್ಕಸ್‌ ನಡೆಯುತ್ತಿರುವ ಬೆನ್ನಲ್ಲೇ ಇದರ ಸಲುವಾಗಿ ಸಿಡಿ ಲೇಡಿ ಹೆಜ್ಜೆ ಗುರುತು ಪತ್ತೆ ಹಚ್ಚಲು ಈ ಸಹೋದರರು ಮುಂದಾಗಿದ್ದಾರೆ ಎನ್ನಲಾಗಿದೆ. ಯುವತಿಯನ್ನು ಪತ್ತೆ ಹಚ್ಚಿ ಪೋಷಕರಿಂದ ಕೇಸ್ ವಾಪಸು ಪಡೆಯುವ ಸರ್ಕಸ್ ನಡೆಸಲಾಗುತ್ತಿದೆ. ಹೇಗಾದರೂ ಈ ಕೇಸ್‌ ಕ್ಲೋಸ್‌ ಮಾಡುವ ಪ್ರಯತ್ನ ನಡೆಸುತ್ತಿದೆ.

ಆದರೆ ಇದೇ ವೇಳೆ, ಸಿಡಿ ಲೇಡಿ ಎಲ್ಲಿದ್ದಾರೆ ಎನ್ನುವುದು ಕೂಡ ಅಷ್ಟೇ ನಿಗೂಢವಾಗಿದೆ. ಯುವತಿ ಒಪ್ಪಿದರೆ ಮಾತ್ರ ಕೇಸ್‌ ಕ್ಲೋಸ್‌ ಆಗುತ್ತದೆ, ಸಚಿವರಾಗಲು ಸಾಧ್ಯವಾಗುತ್ತದೆ. ಆದ್ದರಿಂದ ಆಕೆಯ ಮನವೊಲಿಸುವಂತೆ ಪಕ್ಷದ ಆಪ್ತರು ಜಾರಕಿಹೊಳಿ ಅವರಿಗೆ ಸಲಹೆ ನೀಡಿರುವ ಹಿನ್ನೆಲೆಯಲ್ಲಿ ಯುವತಿಯ ಜಾಡಿನ ಪತ್ತೆಗೆ ಹರಸಾಹಸ ಶುರುವಾಗಿದೆ.

ಹೀಗಾಗಿ ಎರಡು ದಿನಗಳಿಂದ ನಿರಂತರವಾಗಿ ಬೆಂಗಳೂರು ಮತ್ತು ದೆಹಲಿ ವಕೀಲರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net