ತಂಗಿಯನ್ನು ತನಗೆ ಮದ್ವೆ ಮಾಡಿಸದಿದ್ರೆ ಡಿವೋರ್ಸ್‌ ಕೊಡ್ತೀನಿ ಅಂತ ಧಮ್ಕಿ ಹಾಕ್ತಿದ್ದಾರೆ, ಏನು ಮಾಡಲಿ?

nyayadevate
Published on
ನನ್ನ ತಂಗಿ ವಿಧವೆ. ಅವಳು ನನ್ನ ಜತೆಗೇ ಇದ್ದಾಳೆ. ಅವಳಿಗೆ ಬೇರೆ ಮದುವೆ ಮಾಡಿಸಲು ನಾವು ತಯಾರಿ ನಡೆಸಿದ್ದು, ಅದಕ್ಕೆ ಅವಳೂ ಒಪ್ಪಿದ್ದಾಳೆ. ಆದರೆ ಈಗ ಸಮಸ್ಯೆ ಸಮಸ್ಯೆ ಬಂದಿರುವುದು ನನ್ನ ಗಂಡನದ್ದು. ಅವರು ಏನೂ ಕೆಲಸ ಮಾಡುತ್ತಿಲ್ಲ. ನಾನೇ ದಿನವೂ ಖರ್ಚಿಗೆ ದುಡ್ಡು ಕೊಡಬೇಕು.

ಈಗ ಅವರು ನನ್ನ ತಂಗಿಯನ್ನು ಮದುವೆ ಆಗುತ್ತೇನೆ ಎಂದು ಹಠ ಹಿಡಿದಿದ್ದಾರೆ. ಇದಕ್ಕೆ ಒಪ್ಪದಿದ್ದರೆ ಡೈವೋರ್ಸ್ ಕೊಡುತ್ತೇನೆ ಎಂದು ಹೆದರಿಸುತ್ತಿದ್ದಾರೆ. ಈ ವಿಷಯದಲ್ಲಿ ಜಗಳವಾಡಿ ನನ್ನ ಗಂಡ ನನ್ನ ತಾಯಿಯನ್ನೂ ಚೆನ್ನಾಗಿ ಹೊಡೆದಿದ್ದಾರೆ. ನಮ್ಮ ತಂದೆಯ ಕಚೇರಿ ಹತ್ತಿರ ಹೋಗಿ ಗಲಾಟೆ ಮಾಡುತ್ತಿದ್ದಾರೆ. ನನ್ನ ತಂಗಿಯನ್ನು ಹೇಗಾದರೂ ಒಪ್ಪಿಸಿ ಮದುವೆ ಮಾಡಿಸಿದರೆ ಇಂಥ ವ್ಯಕ್ತಿ ಜತೆ ಆಕೆ ಜೀವನವೂ ಹಾಳಾಗುತ್ತದೆ. ಈಗ ಏನು ಮಾಡಬೇಕು ಎಂದೇ ತಿಳಿಯದಾಗಿದೆ. ಕಾನೂನಿನಡಿ ಪರಿಹಾರವಿದೆಯೆ?

ಉತ್ತರ: ನೀವು ಕೂಡಲೇ ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಣೆ ಮಾಡುವ ಕಾನೂನಿನ ಕೆಳಗೆ ನಿಮ್ಮ ಪತಿಯ ವಿರುದ್ಧ ಪ್ರಕರಣ ದಾಖಲಿಸಿ. ಅವರು ನಿಮ್ಮ ಮನೆಗೆ ಬರಬಾರದು ಎನ್ನುವ ಪ್ರೊಟೆಕ್ಷನ್ ಆರ್ಡರ್ /ರಕ್ಷಣೆಯ ಆದೇಶವನ್ನು ಪಡೆಯಿರಿ. ನಿಮ್ಮ ತಂದೆಯಿಂದಲೂ ನಿಮ್ಮ ಪತಿಯ ವಿರುದ್ಧ ಫಿರ್ಯಾದು ದಾಖಲಿಸಿ. ನಿಮ್ಮ ತಂಗಿಯನ್ನು ಮದುವೆಯಾಗಲು ಹಿಂಸೆ ಮಾಡುತ್ತಿದ್ದಾರೆ ಎನ್ನುವುದನ್ನೂ ನೀವು ಪ್ರಕರಣದಲ್ಲಿ ತಿಳಿಸಿ. ಹಾಗೆಯೇ ಅವಳಿಂದಲೂ ರಕ್ಷಣೆ ಕೋರಿ ಪೊಲೀಸರಿಗೆ ಅರ್ಜಿ ಸಲ್ಲಿಸಿ.

ಯಾವುದೇ ಕಾರಣಕ್ಕೂ ನಿಮ್ಮ ಪತಿ ನಿಮ್ಮ ತಂಗಿಯನ್ನು ಮದುವೆ ಆಗಲು ಒಪ್ಪಲೇ ಬೇಡಿ. ಒಬ್ಬ ಪತ್ನಿ ಬದುಕಿರುವಾಗ ಆಕೆಯಿಂದ ವಿಚ್ಛೇದನ ಪಡೆಯದೇ ಇನ್ನೊಂದು ಮದುವೆ ಆಗವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧ. ನಿಮಗೆ ಆತ ವಿಚ್ಛೇದನ ಕೊಡುತ್ತೇನೆ ಎಂದು ಹೆದರಿಸಿದರೆ ನೀವು ಹೆದರಬೇಡಿ. ಇಂತಹ ವ್ಯಕ್ತಿಯ ಜತೆ ವೈವಾಹಿಕ ಸಂಬಂಧ ಇಟ್ಟುಕೊಂಡು ನಿಮಗೆ ಬರುವ ಲಾಭವಾದರೂ ಏನು? ಮೇಲಾಗಿ ವಿಚ್ಛೇದನವನ್ನು ಯಾರೂ ಯಾರಿಗೂ ಕೊಡಲಾಗುವುದಿಲ್ಲ. ವಿಚ್ಛೇದನ ಕೊಡುವ ಅಧಿಕಾರ ಇರುವುದು ನ್ಯಾಯಾಲಯಕ್ಕೆ ಮಾತ್ರ. ತಾನೇ ತಪ್ಪು ಮಾಡಿ, ವಿಚ್ಛೇದನ ಪಡೆಯುವ ಅಧಿಕಾರ ಯಾರಿಗೂ ಇರುವುದಿಲ್ಲ. ಆತ ಪ್ರಕರಣ ದಾಖಲಿಸಲಿ. ನೀವು ಧೈರ್ಯವಾಗಿ ಎದುರಿಸಿ. ಆತನನ್ನು ಪೋಷೊಸುವುದನ್ನು ಇನ್ನಾದರೂ ನಿಲ್ಲಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net