

ವಿಜಯಪುರ: ಜ್ಯೋತಿಷ, ಭವಿಷ್ಯ, ಕಾಲಜ್ಞಾನದ ಕುರಿತಂತೆ ಹಲವಾರು ನಂಬಿಕೆಗಳಿವೆ. ಕೆಲವರು ಇದನ್ನು ನಂಬಿದರೆ, ಇನ್ನು ಹಲವರು ಇವೆಲ್ಲಾ ಸುಳ್ಳು ಎನ್ನುವುದು ಇದೆ. ಯಾರೇ ಏನೇ ಅಂದರೂ ಕೆಲವು ಸತ್ಯಗಳು ಮಾತ್ರ ಯಾರ ಊಹೆಗೂ ನಿಲುಕದೇ ಸಾಗುತ್ತಿವೆ. ಕೆಲವು ಕಾಲಜ್ಞಾನಿಗಳು ನುಡಿದಿರುವ ಭವಿಷ್ಯ ನಿಜವಾಗುತ್ತಲೇ ಇವೆ. ಶತಮಾನಗಳ ಹಿಂದೆಯೇ ಕೆಲ ಕಾಲಜ್ಞಾನಿಗಳು ಮುಂದಿನ ಆಗುಹೋಗುಗಳ ಭವಿಷ್ಯ ನುಡಿದಿದ್ದಾರೆ.
ಇಂಥ ಒಂದು ಕಾಲಜ್ಞಾನದಲ್ಲಿ ಒಂದಾಗಿರುವುದು ವಿಜಯಪುರ ಜಿಲ್ಲೆಯ ಬಬಲಾದಿ ಮಠ. ಸುಮಾರು 500 ವರ್ಷಗಳ ಹಿಂದೆ ಈ ಮಠದ ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನವನ್ನು, ಪ್ರತಿ ವರ್ಷ ಓದಲಾಗುತ್ತದೆ. ತೆಲಗು ಮಾತನಾಡುವ ರಾಜ್ಯಕ್ಕೆ ಜಲಕಂಟಕ ಎಂದು 2021ರ ಮಾರ್ಚ್ ತಿಂಗಳಿನಲ್ಲಿ ಬಬಲಾದಿ ಮಠದ ಸಿದ್ರಾಮಯ್ಯ ಹೊಳಿಮಠ ಅವರು ಕಾಲಜ್ಞಾನದ ಕುರಿತು ನುಡಿದಿದ್ದರು. ವಾಯುಭಾರ ಕುಸಿತದಿಂದ ತಿರುಪತಿಯಲ್ಲಿ ಜಲಪ್ರಳಯವಾಗಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿದ್ದು, ಇನ್ನು ನಮ್ಮ ಕಣ್ಣ ಮುಂದೆಯೇ ಇದ್ದು, ಬಬಲಾದಿ ಮಠದ ಭವಿಷ್ಯ ನಿಜವಾಗಿತ್ತು.
ಹೀಗಾಗಿ 2021ರ ಶಿವರಾತ್ರಿಯ ದಿನ ಸಿದ್ರಾಮಯ್ಯ ಹೊಳಿಮಠ ನುಡಿದ ಭವಿಷ್ಯದ ವಿಡಿಯೋ ತುಣುಕು ಎಲ್ಲೆಡೆ ವೈರಲ್ ಆಗಿತ್ತು. ’ರಾಜಕೀಯ ಏರಿಳಿತವಾಗಿದೆ, ಪಕ್ಷಪಕ್ಷದೊಳಗೆ ಅಸೂಹೆ ಮೂಡಲಿದೆ, ಗಾಳಿ ಹೆಚ್ಚಾಗಲಿದೆ, ಮಹಾವ್ಯಾಧಿ ಹುಟ್ಟುತ್ತದೆ, ಆಂಧ್ರ ತೆಲುಗು ರಾಜ್ಯಕ್ಕೆ ಕೇಡಾಗುತ್ತದೆ. ಯುದ್ಧದ ಭಯವೂ ಇದೆ, ಚಿಕ್ಕಯ್ಯಪ್ಪನವರು ಬರೆದಿಟ್ಟಿರುವ ಕಾಲಜ್ಞಾನ ಎಂದಿಗೂ ಸುಳ್ಳಾಗುವುದಿಲ್ಲ ಮಕ್ಕಳ್ರಾ’ ಎಂದು ಸಿದ್ದು ಮುತ್ಯಾ ಭವಿಷ್ಯ ನುಡಿದಿದ್ದರು. ಅದು ನಿಜವೇ ಆಗಿದೆ.
ಇದೀಗ ಏಕಾಏಕಿ ತಾರಕಕ್ಕೇರಿರುವ ಹಿಜಾಬ್ ಸಂಘರ್ಷದ ಕುರಿತಂತೆಯೂ ಉಲ್ಲೇಖವಾಗಿದ್ದು, ಇದರ ಬಗ್ಗೆಯೂ ಸಾಕಷ್ಟು ಚರ್ಚೆಯಾಗುತ್ತಿದೆ. ಈ ಬಾರಿಯ ಕಾಲಜ್ಞಾನದಲ್ಲಿ ಹಿಂಗಾರಿ ಕಂಡುಮಂಡಲ, ಒಂದು ಕಡೆ ಮಳೆಯಾದರೆ, ಇನ್ನೊಂದು ಕಡೆ ಮಳೆಯಿಲ್ಲ. ಕೋಮು ದಂಗೆಗಳು ಹೆಚ್ಚಾಗುತ್ತದೆ, ಅಗ್ನಿ ಅವಘಡ ಜಾಸ್ತಿಯಾಗುತ್ತದೆ. ಭೂಮಿ ಕುಪ್ಪಳಿಸುತ್ತದೆ, ಭೂಕಂಪನವಾಗಲಿದೆ ಎನ್ನಲಾಗಿತ್ತು.
ಇವೆಲ್ಲಾ ನಿಜವಾಗಿದ್ದರೂ ಇದೀಗ ಹಿಜಾಬ್ ಸಂಘರ್ಷದ ವಿಷಯಕ್ಕೆ ಬರುವುದಾದರೆ, ಕಳೆದ ವರ್ಷದ ಶಿವರಾತ್ರಿಯ ಸಂದರ್ಭದಲ್ಲಿ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಾಲಜ್ಞಾನ ನುಡಿದಿದ್ದ ಸಿದ್ದು ಮುತ್ಯಾ ಕರಿಕಲ್ಲಿನ ಮೇಲೆ ಬಿಳಿರೇಖೆಯಂತೆ ಗೂಡಾರ್ಥದ ಭವಿಷ್ಯವನ್ನು ನುಡಿದಿದ್ದರು. ‘ಇನ್ನು ಮುಂದೆ ಅನ್ಯ ಕೋಮಿನ ದಂಗೆಗಳು ಏಳುತ್ತವೆ’ ಎನ್ನುವ ಭವಿಷ್ಯ ಬರೆದಿದ್ದರು. ಇದೀಗ ಅಕ್ಷರಶಃ ನಿಜವಾಗಿದೆ. ಹಿಜಾಬ್ ಘಟನೆಗೂ ಸಿದ್ದು ಮುತ್ಯಾ ಅವರು ರೇಖೆ ಮೂಡಿಸಿ ಬರೆದಿರುವ ಈ ವಿಷಯಕ್ಕೂ ತಾಳೆಯಾಗುತ್ತಿದ್ದು, ಕಾಲಜ್ಞಾನದ ಬಗ್ಗೆ ಇನ್ನಷ್ಟು ಅಚ್ಚರಿ ಮೂಡಿಸುವಂತಿದೆ.