

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮತ್ತೆ ಸಂಕಟ ಎದುರಾಗಿದೆ. ಈ ಹಿಂದೆ ಅವರು ಮುಖ್ಯಮಂತ್ರಿ ಇದ್ದಾಗ ಸಾಮಾಜಿಕ ಹೋರಾಟಗಾರ ಟಿಜೆ ಆಬ್ರಹಾಂ ಸಲ್ಲಿಸಿರುವ ಅರ್ಜಿಗೆ ಮತ್ತೆ ಜೀವ ಬಂದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಯಡಿಯೂರಪ್ಪ ಮತ್ತು ಅವರ ಪುತ್ರ ಬಿ.ವೈ ವಿಜಯೇಂದ್ರ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿದೆ.
ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಐಎಎಸ್ ಅಧಿಕಾರಿ ಪ್ರಕಾಶ್ ಹಾಗೂ ಎಸ್.ಟಿ. ಸೋಮಶೇಖರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ಇಬ್ರಾಹಿಂ ಕೇಸನ್ನು ದಾಖಲು ಮಾಡಿದ್ದರು. ಆದರೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಹಿನ್ನೆಲೆಯಲ್ಲಿ ಅವರ ವಿಚಾರಣೆಗೆ ರಾಜ್ಯಪಾಲರ ಪೂರ್ವಾನುಮತಿ ಬೇಕಿತ್ತು. ಆದರೆ ಆಗ ರಾಜ್ಯಪಾಲರು ಅನುಮತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕೇಸು ಅಲ್ಲಿಯೇ ಸ್ಥಗಿತಗೊಂಡಿತ್ತು.
ಇದೀಗ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಇಲ್ಲದೇ ಇರುವ ಕಾರಣ, ಪುನಃ ಇಬ್ರಾಹಿಂ ಅವರು ಕೋರ್ಟ್ ಬಾಗಿಲಿಗೆ ಹೋಗಿದ್ದಾರೆ. ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿರುವ ಕಾರಣ, ವಿಚಾರಣೆ ನಡೆಸಲು ಯಾವುದೇ ಪೂರ್ವಾನುಮತಿ ಬೇಕಾಗಿಲ್ಲ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು. ಆದ್ದರಿಂದ ಅವರಿಗೆ ನೋಟಿಸ್ ಜಾರಿಗೆ ಆದೇಶಿಸಿರುವ ಕೋರ್ಟ್, ವಿಚಾರಣೆಗೆ ಹಾಜರಾಗುವಂತೆ ಹೇಳಿದೆ.
ಕೆಲ ದಿನಗಳ ಹಿಂದೆಯಷ್ಟೇ ಯಡಿಯೂರಪ್ಪ ಹಾಗೂ ಅವರ ಕುಟುಂಬದವರ ವಿರುದ್ಧದ ಭ್ರಷ್ಟಾಚಾರ ಆರೋಪ ಪ್ರಕರಣವನ್ನು ಸಿಬಿಐ ಅಥವಾ ಎಸ್ಐಟಿ ತನಿಖೆಗೆ ವಹಿಸಬೇಕೆಂದು ಕೋರಿ ಪಿಐಎಲ್ ಸಲ್ಲಿಸುವುದಕ್ಕೆ ಅವಕಾಶ ನೀಡುವಂತೆ ಹೈಕೋರ್ಟ್ನಲ್ಲಿ ಟಿ.ಜೆ.ಅಬ್ರಹಾಂ ಅರ್ಜಿ ಸಲ್ಲಿಸಿದ್ದರು. ಆದರೆ ಇದಾಗಲೇ ಒಂದು ಕೇಸ್ ಪೆಂಡಿಂಗ್ ಇದ್ದ ಕಾರಣ, ಇದನ್ನು ಸ್ವೀಕರಿಸಲು ಆಗುವುದಿಲ್ಲ ಎಂದು ಕೋರ್ಟ್ ಹೇಳಿತ್ತು.