ಹನಕೆರೆಯಲ್ಲಿ ಸುಮಲತಾ ಸ್ವಂತ ಮನೆ- ರಾಜಕೀಯ ವಲಯದಲ್ಲಿ ಶುರುವಾಯ್ತು ಗುಸುಗುಸು ಚರ್ಚೆ...

sumalatha
ಮಗ ಅಭಿಷೇಕ್‌ ಜತೆ ಸಂಸದೆ ಸುಮಲತಾ
Published on

ಮಂಡ್ಯ: ಚುನಾವಣೆಯಲ್ಲಿ ಕೊಟ್ಟ ಮಾತನ್ನು ಸಂಸದೆ ಸುಮಲತಾ ಅಂಬರೀಶ್‌ ಉಳಿಸಿಕೊಂಡಿದ್ದು, ಮಂಡ್ಯ ಜಿಲ್ಲೆಯ ಹನಕೆರೆ ಗ್ರಾಮದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಲೋಕಸಭಾ ಚುನಾವಣೆ ಗೆದ್ದ ವೇಳೆ ಸುಮಲತಾ ಅವರು ಮಂಡ್ಯ ಜಿಲ್ಲೆಯಲ್ಲಿಯೇ ಮನೆ ನಿರ್ಮಾಣ ಮಾಡಿ, ಇಲ್ಲೇ ಇರುತ್ತೇನೆ ಎಂದು ಹೇಳಿದ್ದರು. ಅದರಂತೆ ಇದೀಗ ಇಲ್ಲಿಯೇ ಮನೆ ನಿರ್ಮಾಣ ಶುರು ಮಾಡಿದ್ದಾರೆ.

ಮಂಡ್ಯ-ಮದ್ದೂರು ನಡುವಿನ ಹನಕೆರೆ ಗ್ರಾಮದಲ್ಲಿ ಸುಮಲತಾ ಸ್ವಂತ ಮನೆ ನಿರ್ಮಿಸಲಿದ್ದು, ತಮ್ಮ ತನ್ನ ಆಪ್ತ ವಲಯದಲ್ಲಿ ಗುರುತಿಸಿಕೊಂಡರುವ ಹನಕೆರೆ ಶಶಿ ಎಂಬುವರಿಂದ ಜಾಗ ಖರೀದಿ ಮಾಡಿದ್ದಾರೆ. 30 ಗಂಟೆ ಜಾಗದಲ್ಲಿ ಮನೆ ನಿರ್ಮಿಸಲು ಇಂದು ಗುದ್ದಲಿ ಪೂಜೆ ನೆರವೇರಿಸಲಿದ್ದಾರೆ. ಬೆಳಿಗ್ಗೆ 9:30ಕ್ಕೆ ಪೂಜೆ ನೆರವೇರಲಿದೆ.

ಮುಂದಿನ ಎಂಟು ತಿಂಗಳಲ್ಲಿ ಮನೆ ನಿರ್ಮಿಸಿ ವಿಧಾನಸಭೆ ಚುನಾವಣೆ ತಯಾರಿ ಆರಂಭಿಸುವ ಯೋಜನೆ ಸಂಸದೆಗೆ ಇದೆ. ಸುಮಲತಾ ನಿವಾಸ ಗುದ್ದಲಿ ಪೂಜೆ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಸ್ವಂತ ಮನೆ ನಿರ್ಮಾಣ ಹಿಂದಿದೆಯಾ ಪುತ್ರನ ರಾಜಕೀಯ ಭವಿಷ್ಯ ಎಂಬ ಪ್ರಶ್ನೆ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಚುನಾವಣೆಯಲ್ಲಿ ಮದ್ದೂರು ಕ್ಷೇತ್ರದಿಂದ ಅಭಿಷೇಕ್‌ ಅವರನ್ನು ಕಣಕ್ಕಿಸಲು ಸುಮಲತಾ ಪ್ಲ್ಯಾನ್‌ ಮಾಡುತ್ತಿದ್ದಾರೆ ಎನ್ನಲಾಗಿದೆ.

ರೆಬೆಲ್ ಸ್ಟಾರ್ ಅಂಬರೀಶ್ ಹುಟ್ಟೂರು ಕೂಡ ಮದ್ದೂರಿನ ದೊಡ್ಡರಸಿನಕೆರೆ ಗ್ರಾಮ. ಹೀಗಾಗಿ ಮದ್ದೂರು ಕ್ಷೇತ್ರದಿಂದಲೇ ಮಗನ ಸ್ಪರ್ಧೆಗೆ ಸಿದ್ಧತೆ ನಡೆಸುವ ಸಾಧ್ಯತೆ ಇದೆ ಎಂದು ಸುದ್ದಿಗಳು ಹರಿದಾಡುತ್ತಿವೆ. ಮಗನ ರಾಜಕೀಯ ಭವಿಷ್ಯಕ್ಕೆ ಸಹಕಾರಿಯಾಗಲೆಂದೇ ಹನಕೆರೆ ಬಳಿ ಸ್ವಂತ ಮನೆ ನಿರ್ಮಾಣ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ.

ಅಂದಹಾಗೆ ಹನಕೆರೆ ಗ್ರಾಮ ಮಂಡ್ಯ ಹಾಗೂ ಮದ್ದೂರು ಮಧ್ಯೆ ಇದ್ದು, ಈ ಎರಡೂ ಊರುಗಳಿಗೆ ಹತ್ತಿರವಾಗುವಂತೆ ಯೋಜನೆ ರೂಪಿಸಲಾಗಿದೆ ಎನ್ನಲಾಗುತ್ತಿದ್ದು, ಸದ್ಯ ಮಂಡ್ಯ ರಾಜಕೀಯ ವಲಯದಲ್ಲಿ ಮನೆ ನಿರ್ಮಾಣದ ಲುರಿತು ಗುಸುಗುಸು ಆರಂಭವಾಗಿದೆ.

ಗುದ್ದಲಿ ಪೂಜೆಯ ಕಾರ್ಯಕ್ರಮದಲ್ಲಿ, ಅಭಿಷೇಕ್ ಅಂಬರೀಶ್, ನಟರಾದ ದರ್ಶನ್, ಯಶ್, ಹಾಗೂ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೂಡ ಭಾಗಿಯಾಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net