

ಮಂಡ್ಯ: ಜಮೀನಿನ ಕೆಲಸಕ್ಕೆ ಹೋಗಿದ್ದ 11 ವರ್ಷದ ದಲಿತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹುರುಗಲವಾಡಿ ಗ್ರಾಮದಲ್ಲಿ ನಡೆದಿದ್ದು, ಭಾರಿ ಪ್ರತಿಭಟನೆಗೆ ಕಾರಣವಾಗಿದೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ತಾಳೀಬಸವನಪುರ ತಾಂಡದ ನಿವಾಸಿಯಾಗಿರುವ ಬಾಲಕಿ ಹಾಗೂ ಈಕೆಯ ಕುಟುಂಬ ಕಳೆದ ಐದು ವರ್ಷಗಳಿಂದ ಹುರುಗಲವಾಡಿ ಕಬ್ಬಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ 2ನೇ ತಾರೀಕಿನಂದು ಬಾಲಕಿ ಕೆಲಸಕ್ಕೆ ಹೋದಾಗ ಅದೇ ಗ್ರಾಮದ ಅಪ್ಪಾಜಿ ಎನ್ನುವವರ ಮಗ ಆಕಾಶ್ ಜಮೀನಿಗೆ ಹೋಗಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ.
ಬಾಲಕಿ ಜೋರಾಗಿ ಕಿರುಚಿಗೊಂಡಾಗ ಗ್ರಾಮಸ್ಥರು ಮತ್ತು ಕುಟುಂಬಸ್ಥರು ಸ್ಥಳಕ್ಕೆ ಬರುವುದನ್ನು ಗಮನಿಸಿದ ಆಕಾಶ್ ತನ್ನ ಬಗ್ಗೆ ಬಾಲಕಿ ಹೇಳಬಹುದು ಎನ್ನುವ ಕಾರಣಕ್ಕೆ ಬಾಲಕಿಯನ್ನು ಸಾಯಿಸಿದ್ದಾನೆ. ಜನರು ಬರುತ್ತಿರುವುದನ್ನು ನೋಡಿ ಪರಾರಿಯಾಗಿದ್ದಾನೆ. ಈತನನ್ನು ಗ್ರಾಮಸ್ಥರು ನೋಡಿದ್ದಾರೆ. ಯುವಕನ ವಿರುದ್ಧ ದೂರು ದಾಖಲಾಗಿದೆ. ಈ ನಡುವೆ, ಸರ್ಕಾರ ಸಂತ್ರಸ್ತೆಯ ಕುಟುಂಬಕ್ಕೆ 8.25 ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದು, ಈ ಪೈಕಿ, 4,12,500 ರೂಪಾಯಿಗಳನ್ನು ಈಗಾಗಲೇ ನೀಡಿದೆ.
ಪರಿಹಾರ ಮೊತ್ತ ಕೊಟ್ಟು ಕೈತೊಳೆದುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ನಿನ್ನೆಯೂ ಭಾರಿ ಪ್ರತಿಭಟನೆ ನಡೆದಿದೆ. ಬಾಲಕಿ ಮೃತ ದೇಹವಿಟ್ಟು ಗುರುವಾರ ತಡರಾತ್ರಿಯಿಂದ ಜನರು ಪ್ರತಿಭಟನೆ ನಡೆಸಿದರು. ಯುವಕನನ್ನು ಬಂಧಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುವುದಾಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಾಲಕಿ ಸಾವಿಗೆ ನ್ಯಾಯ ದೊರಕಿಸಿ ಕೊಡಬೇಕು. ಬಾಲಕಿ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡಬೇಕು. ಪ್ರಕರಣವನ್ನು ಮಂಡ್ಯದಿಂದ ಹೊಸಪೇಟೆಗೆ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಧಾವಿಸಿದ ಡಿಸಿ ಎಸ್.ಎಸ್. ನಕುಲ್, ಬಾಲಕಿ ಮೃತ ದೇಹಕ್ಕೆ ಮಾಲೆ ಸಲ್ಲಿಸಿ, ಪ್ರತಿಭಟನಾನಿರತರನ್ನು ಸಮಾಧಾನ ಪಡಿಸಿದರು.
ಎಲ್ಲ ಸಮುದಾಯಗಳಲ್ಲೂ ಶೋಷಿತ ಮಹಿಳೆಯರಿದ್ದಾರೆ. ಅಂಥವರ ಅನುಕೂಲಕ್ಕೆ ರಾಜ್ಯದಲ್ಲಿ ಮೊದಲ ಬಾರಿಗೆ ಖನಿಜ ನಿಧಿ ಬಳಕೆ ಮಾಡಲಾಗುತ್ತಿದೆ. ಸಿಎಂ ನಿಧಿಯಿಂದ ಪರಿಹಾರ ಕೊಡಿಸಲಾಗುತ್ತಿದೆ. ಬಾಲಕಿ ಸಾವಿನ ಪ್ರಕರಣವನ್ನು ಮಂಡ್ಯದಿಂದ ಹೊಸಪೇಟೆಗೆ ವರ್ಗಾವಣೆಗೊಳಿಸಲು ಎಸ್‌ಪಿ ಜತೆ ಚರ್ಚಿಸಲಾಗುವುದು. ಬಾಲಕಿ ಆತ್ಮಕ್ಕೆ ಶಾಂತಿ ಸಿಗಲು ಶವಸಂಸ್ಕಾರಕ್ಕೆ ಸಹಕರಿಸಿ ಎಂದು ಕೋರಿದರು. ನಂತರ ಗ್ರಾಮಸ್ಥರು ಪ್ರತಿಭಟನೆ ಕೈಬಿಟ್ಟರು.