ಮದ್ವೆಯಾಗ್ತೇನೆಂದು ವಿಧುರನ ಬಳಿ ಬಂದ ಆಂಟಿ: ಚಿನ್ನಾಭರಣ ದೋಚಿ ಎಸ್ಕೇಪ್‌- ಶಿವಮೊಗ್ಗದವನ ಸ್ಕೆಚ್ ಹಾಕಿದ ಬೆಂಗಳೂರು ‘ಬೆಡಗಿ’

aunty
Published on

ಶಿವಮೊಗ್ಗ: 60 ವರ್ಷದ ಶಿವಮೊಗ್ಗದ ವಿಧುರರೊಬ್ಬರ ಎರಡನೆಯ ಪತ್ನಿಯಾಗುವುದಾಗಿ ನಂಬಿಸಿ ತಾಳಿ ಕಟ್ಟಿಸಿಕೊಂಡ ನಂತರ ತಾಲಿ, ಕಾಲುಂಗರದ ಜತೆಗೆ ಬೆಂಗಳೂರಿನ ಮಹಿಳೆಯೊಬ್ಬಳು ಪರಾರಿಯಾಗಿರುವ ಘಟನೆ ನಡೆದಿದೆ.

‌ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಗ್ರಾಮದ 60 ವರ್ಷದ ನಂಜುಂಡಪ್ಪ, ಬೆಂಗಳೂರಿನ ನಿವಾಸಿ ಚಂದ್ರಿಕಾ ಎಂಬಾಕೆಯಿಂದ ಮೋಸ ಹೋಗಿದ್ದಾರೆ. ನಂಜುಂಡಪ್ಪ ಅವರ ಪತ್ನಿ ಕೆಲ ತಿಂಗಳ ಹಿಂದೆ ತೀರಿಕೊಂಡಿದ್ದರಿಂದ ಅವರು ಎರಡನೆಯ ಮದುವೆ ಮಾಡಿಕೊಳ್ಳಲು ಮ್ಯಾಟ್ರಿಮೋನಿಯಲ್ಲಿ ಜಾಹೀರಾತು ನೀಡಿದ್ದರು. ಇದನ್ನು ನೋಡಿದ್ದ ಚಂದ್ರಿಕಾ ತಾನು ಮದುವೆಯಾಗುವುದಾಗಿ ಶಿವಮೊಗ್ಗಕ್ಕೆ ಹೋಗಿದ್ದಾಳೆ.

ನಂತರ ಮದುವೆಗೆ ಸಿದ್ಧತೆ ನಡೆಸಲಾಗಿದೆ. ನವೆಂಬರ್‌ 15 ರಂದು ಸಿಗಂದೂರು ದೇವಸ್ಥಾನದಲ್ಲಿ ಮದುವೆಗೆ ಸಿದ್ದತೆ ನಡೆಸಲಾಗಿತ್ತು. ಮೂವರು ಮಕ್ಕಳನ್ನು ಹೊಂದಿರುವ ನಂಜುಂಡಪ್ಪನವರು ಮದುವೆಗೆ ಸ್ನೇಹಿತರನ್ನೂ ಕರೆದುಕೊಂಡು ಹೋಗಿದ್ದರು. ಆದರೆ ಸದ್ಯ ಅಲ್ಲಿ ಮದುವೆಗೆ ಅವಕಾಶ ಇಲ್ಲ ಎಂದಿದ್ದಾರೆ. ಆ ಸಮಯದಲ್ಲಿ ಮದುವೆಗೆ ಮದುವೆಗೆ ತಂದಿದ್ದ ಚಿನ್ನದ ತಾಳಿ, 4 ಬೆಳ್ಳಿ ಕಾಲುಂಗುರು, 2 ಬೆಳ್ಳಿ ಕಾಲು ಚೈನು, ಎರಡು ಬೆಳ್ಳಿ ಕೈ ಬಳೆ, ರೇಷ್ಮೆ ಸೀರೆ ಚಂದ್ರಿಕಾಳ ಬಳಿ ಇತ್ತು. ಸಿಗಂದೂರಿನಲ್ಲಿ ಮದುವೆಗೆ ಅವಕಾಶವಿಲ್ಲ ಎಂಬ ಕಾರಣಕ್ಕೆ ಶಿವಮೊಗ್ಗಕ್ಕೆ ವಾಪಸ್‌ ಬಂದಿತ್ತು ಈ ಜೋಡಿ. ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ಬೈಕ್‌ ತರುವುದಾಗಿ ನಂಜುಂಡಪ್ಪ ಹೋದ ಸಮಯದಲ್ಲಿ ತನಗೆ ಹಸಿವೆಯಾಗಿದೆ, ಹೋಟೆಲ್‌ಗೆ ಹೋಗುತ್ತೀನಿ ಎಂದ ಚಂದ್ರಿಕಾ ಒಡವೆ, ಸೀರೆ ಜತೆಗೆ ಪರಾರಿಯಾಗಿದ್ದಾಳೆ.

ಎಷ್ಟು ಹೊತ್ತಾದರೂ ಆಕೆ ಬರದ ನಂತರ ತಾವು ಮೋಸ ಹೋಗಿರುವುದು ನಂಜುಂಡಪ್ಪನವರಿಗೆ ತಿಳಿದಿದ್ದು, ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಈ ಖತರ್ನಾಕ್‌ ಮಹಿಳೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net