ಪರಿಹಾರದ ಹಣ ಹಂಚಿಕೆಯಲ್ಲಿ ಅವ್ಯವಹಾರ: ಐವರು ಇಂಜಿನಿಯರ್​ಗಳಿಗೆ ಬೆಳಗಾವಿ ಕೋರ್ಟ್​ನಿಂದ​ ಶಿಕ್ಷೆ

belagavi
Published on

ಬೆಳಗಾವಿ: ಭೂ ಸ್ವಾಧೀನ ಕಾಯ್ದೆ ಹಾಗೂ ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಪರಿಹಾರ ಧನ ಮಂಜೂರು ಮಾಡಿ, ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದ ನೀರಾವರಿ ಇಲಾಖೆಯ ಐವರು ಇಂಜಿನಿಯರ್​ಗಳಿಗೆ ಎರಡು ವರ್ಷಗಳ ಜೈಲು ಶಿಕ್ಷೆ ಜತೆಗೆ ದಂಡ ವಿಧಿಸಿ ಇಲ್ಲಿನ 4ನೇ ಅಧಿಕ ಜಿಲ್ಲಾ ಸೆಷನ್ಸ್​ ಮತ್ತು ವಿಶೇಷ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ.

ನವಿಲು ತೀರ್ಥ ವೃತ್ತ ಕಚೇರಿಯ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣದ ಅಂದಿನ ಅಧೀಕ್ಷಕ ಅಭಿಯಂತರ ಬಿ.ಪದ್ಮನಾಭ, ಗದಗ ಜಿಲ್ಲೆಯ ನರಗುಂದ ಎಂಆರ್‌ಬಿಸಿ ವಿಭಾಗ ನಂ.1ರ ಅಂದಿನ ಕಾರ್ಯನಿರ್ವಾಹಕ ಅಭಿಯಂತರ ಎಂ.ಬಿ. ಕವದಿ, ನವಿಲು ತೀರ್ಥ ವೃತ್ತ ಕಚೇರಿಯ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ವೃತ್ತ ಕಚೇರಿಯ ಅಂದಿನ ತಾಂತ್ರಿಕ ಸಹಾಯಕ (ಎಇಇ) ಆನಂದ ಕೇಶವರಾವ ಮಿರ್ಜಿ, ಕಿರಿಯ ಅಭಿಯಂತರೆ ಶೋಭಾ ಟಿ. ಹಾಗೂ ಮಲಪ್ರಭಾ ಎಡದಂಡೆ ಕಾಲುವೆ ನಿರ್ಮಾಣ ಉಪವಿಭಾಗ ನಂ.5 ಶಿರಸಂಗಿ ಕಿರಿಯ ಅಭಿಯಂತರ ಪ್ರಕಾಶ ಫಕ್ಕೀರಪ್ಪಾ ಹೊಸಮನಿ ಶಿಕ್ಷೆಗೆ ಗುರಿಯಾದವರು.

ಪ್ರಕರಣದ ಹಿನ್ನೆಲೆ :

ಸವದತ್ತಿ ತಾಲೂಕಿನ ಕಗದಾಳ ಗ್ರಾಮದಲ್ಲಿರುವ ಎಲ್ಲ ಮನೆಗಳು ನೀರಿನಿಂದ ಜವಳು (ಜೌಗು) ಉಂಟಾಗಿ ಜನರಿಗೆ ವಾಸ ಮಾಡಲು ಯೋಗ್ಯವಿಲ್ಲದರಿಂದ ಸರ್ಕಾರವು ಭೂಸ್ವಾಧೀನ ಕಾಯ್ದೆ ಪ್ರಕಾರ ಅವುಗಳನ್ನು ಸ್ವಾಧೀನ ಪಡಿಸಿ ಪುನರ್ವಸತಿ ಕ್ರಮಕೈಗೊಳ್ಳುವ ಪ್ರಕ್ರಿಯೆಯಲ್ಲಿ ಶಿಕ್ಷೆಗೊಳಗಾದ ಅಧಿಕಾರಿಗಳು ಲಂಚಕೊಟ್ಟವರಿಗೆ ಭೂ ಸ್ವಾಧೀನ ಕಾಯ್ದೆ ಮತ್ತು ನಿಯಮಗಳನ್ನು ಉಲ್ಲಂಘಿಸಿ ಹೆಚ್ಚಿನ ಪರಿಹಾರ ಧನ ಮಂಜೂರಿಸಿ ತಮ್ಮ ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದಲ್ಲದೇ ಒಳಒಪ್ಪಂದ ಮಾಡಿಕೊಂಡು ಭ್ರಷ್ಟತನದಿಂದ ತಮಗೆ ಬೇಕಾದವರಿಗೆ ಹೆಚ್ಚಿನ ಪರಿಹಾರ ಮೊತ್ತ ನಿಗದಿಪಡಿಸಿ ಅವಾರ್ಡ್ ಮಾಡಿಸಿ ತಮ್ಮ ಕಾರ್ಯವೈಖರಿಯಲ್ಲಿ ಸರ್ಕಾರಕ್ಕೆ ವಿಶ್ವಾಸ ದ್ರೋಹ ಎಸಗಿದ್ದಾರೆ ಎಂದು ಕಗದಾಳ ಗ್ರಾಮದ ಹಣಮಪ್ಪ ಗದಿಗೆಪ್ಪ ಮಾದರ ಎಂಬುವರು 2012 ಜೂನ್ 13 ರಂದು ಬೆಳಗಾವಿ ಲೋಕಾಯುಕ್ತ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ತನಿಖೆ ಕೈಗೊಂಡ ಅಂದಿನ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ಎಚ್.ಜಿ.ಪಾಟೀಲ ಹಾಘೂ ಜಿ.ಆರ್.ಪಾಟೀಲ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ 4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ನ್ಯಾಯಾಧೀಶರಾದ ಮೋಹನ ಪ್ರಭು ಅವರು, ಐದು ಜನರ ಅಪರಾಧಿಗಳಿಗೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಎರಡು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ 70 ಸಾವಿರ ದಂಡವನ್ನು ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ ಮತ್ತೆ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.

ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಪ್ರವೀಣ ಅಗಸಗಿ ವಕಾಲತ್ತು ವಹಿಸಿದ್ದರು. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯಾಗುವಲ್ಲಿ ಶ್ರಮಿಸಿದ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ಅಧೀಕ್ಷಕಿ ಯಶೋಧಾ ವಂಟಗೋಡಿ ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net