ಇವಿಎಂ ಬೇಡ, ಬ್ಯಾಲೆಟ್​ ಪೇಪರೇ ಬೇಕು ಎಂದ ಅರ್ಜಿ 'ಸುಪ್ರೀಂ'ನಿಂದ ವಜಾ: ವಕೀಲ ಹೇಳಿದ್ದೇನು? ಕೋರ್ಟ್​ ಕೇಳಿದ್ದೇನು?

EVM
Published on

ನವದೆಹಲಿ: ದೇಶದಲ್ಲಿ ಚುನಾವಣೆಗಳಿಗೆ ಮತಪತ್ರಗಳ (ಬ್ಯಾಲೆಟ್ ಪೇಪರ್) ಬದಲು ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಬಳಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂಕೋರ್ಟ್​ ವಜಾಗೊಳಿಸಿದೆ.

ಮತಪತ್ರಗಳ ಬದಲಿಗೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಜಾರಿಗೊಳಿಸಲು ರೂಪಿಸಲಾದ ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ವಕೀಲ ಎಂ.ಎಲ್‌. ಶರ್ಮಾ ಎನ್ನುವವರು ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಎಂ.ಎಂ. ಸುಂದ್ರೇಶ್ ಅವರ ಪೀಠ ಮಾನ್ಯ ಮಾಡಲಿಲ್ಲ.

ಮತ ಪತ್ರದ ಬದಲು, ಮತಯಂತ್ರ ಬಳಸಲು ಅವಕಾಶ ನೀಡಿರುವ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 61ಎ ಅನ್ನು ಅರ್ಜಿದಾರರು ಪ್ರಶ್ನಿಸಿದ್ದರು. ಇದು ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಜನಪ್ರತಿನಿಧಿಗಳ ಬಹುಮತದಿಂದ ಅಂಗೀಕಾರಗೊಂಡಿಲ್ಲ ಎನ್ನುವುದು ಅವರ ವಾದವಾಗಿತ್ತು. ಸಂವಿಧಾನದ 100ನೇ ವಿಧಿಯನ್ನು ಉಲ್ಲೇಖಿಸಿದ್ದ ಅವರು, ಹೀಗೆ ಲೋಕಸಭೆ ಅಥವಾ ರಾಜ್ಯಸಭೆಯಲ್ಲಿ ಜನಪ್ರತಿನಿಧಿಗಳ ಬಹುಮತದಿಂದ ಅಂಗೀಕಾರಗೊಂಡಿಲ್ಲದೇ ಇರುವುದು ಇವುಗಳ ಉಲ್ಲಂಘನೆಯಾಗಿದೆ ಎಂದಿದ್ದರು. ಕೇಂದ್ರ ಕಾನೂನು ಸಚಿವಾಲಯವನ್ನು ಪ್ರತಿವಾದಿಯನ್ನಾಗಿ ಮಾಡಿದ್ದ ಅರ್ಜಿದಾರರು, ಇವಿಎಂ ಬಳಕೆಯ ಕಾಯ್ದೆಯನ್ನು ಅನೂರ್ಜಿತ, ಕಾನೂನುಬಾಹಿರ ಮತ್ತು ಅಸಂವಿಧಾನಿಕ ಎಂದು ಘೋಷಿಸಬೇಕೆಂದು ಕೋರಿದ್ದರು.

ಅವರ ವಾದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ನೀವು ನಿಜವಾಗಿಯೂ ಏನನ್ನು ಪ್ರಶ್ನಿಸಲು ಬಯಸುತ್ತೀರಿ? ಮತದಾನವನ್ನೋ, ಇವಿಎಂ ಅನ್ನೋ ಅಥವಾ ಸದನದಲ್ಲಿ ನಡೆದಿರುವುದನ್ನೋ, ಏನು ಎನ್ನುವುದು ಅರ್ಥವಾಗುತ್ತಿಲ್ಲ ಎಂದರು. ಸದನದಲ್ಲಿ ಮತದಾನದ ಮೂಲಕ ಅಂಗೀಕಾರವಾಗದ, ಇವಿಎಂಗಳ ಬಳಕೆಗೆ ಅನುಮತಿ ನೀಡಿರುವ ಕಾಯ್ದೆಯ ಸೆಕ್ಷನ್ 61ಎ ಅನ್ನು ಪ್ರಶ್ನಿಸುತ್ತಿದ್ದೇನೆ ಎಂದು ಅರ್ಜಿದಾರ ವಕೀಲ ಶರ್ಮಾ ಹೇಳಿದರು.

ಅದಕ್ಕೆ ಕೂಡಲೇ ನ್ಯಾಯಮೂರ್ತಿಗಳು ಈ ವಾದದಲ್ಲಿ ಯಾವುದೇ ಹುರುಳು ಕಾಣಿಸುತ್ತಿಲ್ಲ ಎಂದು ಹೇಳುವ ಮೂಲಕ ಅರ್ಜಿಯನ್ನು ವಜಾಗೊಳಿಸಿದರು (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net