

ಬೆಂಗಳೂರು: ರಾಜ್ಯ ನಾಯಕತ್ವ ಬದಲಾವಣೆಯಾಗುತ್ತದೆ ಎನ್ನುವುದೆಲ್ಲ ಊಹಾಪೋಹ. ಅದ್ಯಾವುದು ಚರ್ಚೆಯಾಗಿಲ್ಲ. ಆದರೆ 2-3 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆಯಾಗುವ ವಿಶ್ವಾಸವಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಸುದ್ದಿಗಾರರಿಗೆ ಮಂಗಳವಾರ ಪ್ರತಿಕ್ರಿಯಿಸಿದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ ಮಾಡಿಕೊಂಡು ಅಮಿತ್ ಷಾ ಅವರು ರಾಜ್ಯಕ್ಕೆ ಬಂದಂತಿದೆ. ಈಗಲೇ ಅಥವಾ ದೆಹಲಿಗೆ ಮರಳಿದ ಬಳಿಕ 2-3 ದಿನಗಳಲ್ಲಿ ಈ ಕುರಿತು ಸ್ಪಷ್ಟ ನಿರ್ಧಾರ ತಿಳಿಸುವ ಸಾಧ್ಯತೆಗಳಿವೆ ಎಂದರು.
ಕಪೋಲಕಲ್ಪಿತ
ನಾಯಕತ್ವ ಬದಲಾವಣೆ ಎನ್ನುವುದು ಕಪೋಲಕಲ್ಪಿತ. ಜನ ಸಾಮಾನ್ಯರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಅವರೇ ಸಿಎಂ ಆಗಿ ಮುಂದುವರಿಯಬೇಕು ಎಂಬುದು ರಾಜ್ಯದ ಜನರ ಬಯಕೆಯಾಗಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಉತ್ತರಿಸಿ, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲವೆಂದು ತಳ್ಳಿಹಾಕಿದರು.