ರಾಜಕೀಯ ಜೀವನದಲ್ಲಿ ಇದು ಈಶ್ವರಪ್ಪ ಮಾಡಿದ ಮೊದಲ ಒಳ್ಳೆ ಕೆಲಸವಂತೆ!

Siddaramaiah-Eshwarappa
Published on

ಬೆಂಗಳೂರು: ಮುಖ್ಯಮಂತ್ರಿಯವರ ವಿರುದ್ಧ ಹಿರಿಯ ಸಚಿವ ಕೆ.ಎಸ್.ಈಶ್ವರಪ್ಪ ಮಾಡಿರುವ ಆರೋಪ ಗಂಭೀರ ಸ್ವರೂಪದ್ದಾಗಿದ್ದು, ರಾಜ್ಯದ ಆಡಳಿತ ಕುಸಿದು ಬಿದ್ದಿರುವುದಕ್ಕೆ ಸಾಕ್ಷಿಯಾಗಿದೆ.

ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶಿಸಿ ಮುಖ್ಯಮಂತ್ರಿಯವರನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸು ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಬಿಜೆಪಿ ಸರ್ಕಾರದ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ಅಕ್ರಮಗಳ ಬಗ್ಗೆ ವಿರೋಧ ಪಕ್ಷದ ನಾಯಕನಾಗಿ ನಾನು ಮಾಡುತ್ತಾ ಬಂದಿರುವ ಆರೋಪಗಳಿಗೆ ಈಶ್ವರಪ್ಪ ಸಾಕ್ಷ್ಯಗಳನ್ನು ಒದಗಿಸಿದ್ದಾರೆ. ಅವರು ಯಾವುದೇ ಒತ್ತಡಕ್ಕೆ ಮಣಿಯದೆ ಮಾತಿಗೆ ಬದ್ಧರಾಗಿ ಉಳಿಯಬೇಕು ಎಂದು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ.

ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದಲ್ಲಿ ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜಕೀಯ ಹಿತಾಸಕ್ತಿಗಿಂತ ರಾಜ್ಯದ ಹಿತಾಸಕ್ತಿ ಮುಖ್ಯ ಎಂದು ಸಾರಿದ್ದಾರೆ ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ, ಅಕ್ರಮಗಳು ಕೇವಲ ಗ್ರಾಮೀಣ ಅಭಿವೃದ್ದಿ ಇಲಾಖೆಯೊಂದಕ್ಕೆ ಸಂಬಂಧಿಸಿದ್ದಲ್ಲ, ಇದು ಸರ್ಕಾರದ ಪ್ರತಿಯೊಂದು ಇಲಾಖೆಯೊಳಗಿನ ಕರ್ಮಕಾಂಡ. ಬಿಜೆಪಿ ವರಿಷ್ಠರು ಈಶ್ವರಪ್ಪನವರ ಬಾಯಿಮುಚ್ಚಿಸಲು ಪ್ರಯತ್ನಿಸದೆ ಇತರ ಸಚಿವರೂ ಮುಕ್ತವಾಗಿ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಮುಖ್ಯಮಂತ್ರಿಗಳ ವಿರುದ್ಧ ಈಶ್ವರಪ್ಪನವರು ರಾಜ್ಯಪಾಲರಿಗೆ ‌ಮಾತ್ರ ಆರೋಪ ಪಟ್ಟಿ ಸಲ್ಲಿಸದೆ, ಅದರ ಪ್ರತಿಯನ್ನು ಪ್ರಧಾನಿ ಮೋದಿ ಮತ್ತು ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೂ ಕಳಿಸಿದ್ದಾರೆ. ಅವರೆಲ್ಲರೂ ಆರೋಪ ಪಟ್ಟಿ ಬಗ್ಗೆ ತಕ್ಷಣ ಪ್ರತಿಕ್ರಿಯಿಸಿ ಆಂತರಿಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net