ಅಮ್ಮಾ.. ಹಠ ಮಾಡಿ ಮದ್ವೆಯಾದೆ, ಅದೇ ಹಠದಲ್ಲೇ ಸಾಯ್ತಿದ್ದೇನೆ: ನಿಗೂಢವಾಗಿದೆ ಬೆಂಗಳೂರಿನ ಇಂಜಿನಿಯರ್ ಡೆತ್‌ನೋಟ್‌!

death
Published on

ಬೆಂಗಳೂರು: ಅಮ್ಮಾ ನನ್ನನ್ನು ಕ್ಷಮಿಸು... ಅಮ್ಮಾ ಐ ಲವ್ ಯೂ, ಹಠ ಮಾಡಿಕೊಂಡು ಇಲ್ಲಿಗೆ ಬಂದೆ. ಹಠ ಮಾಡಿಕೊಂಡು ಹೋಗ್ತಿದ್ದೀನಿ. ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿ ಇಲ್ಲ. ಏನು ಮಾಡ್ತಿದ್ದೀನಿ ಗೊತ್ತಾಗ್ತಿಲ್ಲ ಅಂಜನ್. ಐ ಡೋಂಟ್ ನೋ ವಾಟ್ ಐ ಆ್ಯಮ್ ಡೂಯಿಂಗ್.. ಎಂದು ಡೆತ್‌ನೋಟ್‌ ಬರೆದಿಟ್ಟು ಬೆಂಗಳೂರಿನ ಇಂಜಿನಿಯರ್ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಪ್ರೀತಿಸಿ, ನಂತರ ಮನೆಯವರನ್ನು ಒಪ್ಪಿಸಿ ನಾಲ್ಕು ತಿಂಗಳ ಹಿಂದೆ ಮದುವೆಯಾಗಿದ್ದ ಅಂಜು ಸಾವಿಗೆ ಶರಣಾಗಿದ್ದಾರೆ. ಡೆತ್‌ನೋಟ್‌ ಬರೆದಿಟ್ಟು ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ನೋಟ್‌ನಲ್ಲಿ ಇರುವ ಅಂಶಗಳು ಹಾಗೂ ಈಕೆಯ ಪಾಲಕರು ಹೇಳುತ್ತಿರುವ ಮಾಹಿತಿ ನಿಗೂಢವಾಗಿಯೇ ಉಳಿದಿದೆ.

ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು ಬೋಳನಹಳ್ಳಿಯ ರವಿಕುಮಾರ್ ಹೇಮಾವತಿ ದಂಪತಿಯ ಮಗಳಾಗಿರುವ ಅಂಜು ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಅಗಿ ಕೆಲಸ ನಿರ್ವಹಿಸುತ್ತಿದ್ದರು. ಈಕೆ ಪ್ರೀತಿ ಮಾಡಿ ಕಳೆದ 4 ತಿಂಗಳ ಹಿಂದೆಯಷ್ಟೇ ಅರಕಲಗೂಡು ನಿವಾಸಿ ಅಂಜನ್ ಕಣಿಯಾರ್ ಎಂಬುವವರನ್ನು ಮದುವೆಯಾಗಿದ್ದರು. ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದರೂ ಹಠ ಮಾಡಿ ಇವರನ್ನೇ ಮದುವೆಯಾಗುವೆ ಎಂದಿದ್ದರು.

ಮದುವೆಯಾದ ಬಳಿಕ ಅಂಜು ಅಮ್ಮನ ಬಳಿ ಬಂದಾಗ ತಮಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಬಗ್ಗೆ ಹೇಳಿಕೊಂಡಿದ್ದರಂತೆ. ಅದಾದ ಕೆಲವೇ ದಿನಗಳಲ್ಲಿ ಈಕೆ ಆತ್ಮಹತ್ಯೆಗೆ ಶರಣಾಗಿರುವ ಹಿನ್ನೆಲೆಯಲ್ಲಿ ತಮ್ಮ ಮಗಳನ್ನು ಆಕೆಯ ಗಂಡನ ಮನೆಯವರು ಕೊಲೆ ಮಾಡಿದ್ದಾರೆ ಎಂದು ಅಂಜು ಪಾಲಕರು ಆರೋಪಿಸುತ್ತಿದ್ದಾರೆ.

ಆದರೆ ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನಾನೇ ಕಾರಣ. ನನ್ನ ಮನಸ್ಥಿತಿ ಸರಿ ಇಲ್ಲ. ಏನು ಮಾಡ್ತಿದ್ದೀನಿ ಗೊತ್ತಾಗ್ತಿಲ್ಲ ನನಗೆ ಬೆನ್ನು ನೋವಿದೆ. ಆದರೂ ಹೇಳಿಕೊಳ್ಳಲು ಆಗ್ತಿಲ್ಲ. ಕೋಪ ಹಠ ಮಾಡಿಕೊಳ್ಳುತ್ತಿದ್ದೆ. ನನಗೆ ಹರ್ಟ್ ಆಗ್ತಿತ್ತು. ನನ್ನ ಜೊತೆ ಇದ್ದರೂ ದೂರ ಇದ್ದೀಯಾ ಅಂತಾ ಅನ್ನಿಸ್ತಿದೆ. ಏನೂ ಗೊತ್ತಾಗ್ತಿಲ್ಲ ಬರಿಯೋದಕ್ಕೆ. ಬಾಯ್ ಇನ್ಯಾವತ್ತೂ ನಿನಗೆ ಹಿಂಸೆ ಕೊಡೋದಕ್ಕೆ ಬರೋದಿಲ್ಲ’ ಎಂದಿದ್ದಾರೆ.

ಅವರ ಗಂಡ ಕೂಡ ಇದೇ ಮಾತನ್ನು ಹೇಳಿದ್ದಾರೆ. ನಿನ್ನೆ ಬೆಳಗ್ಗೆ ಸಂಬಂಧಿ ಹುಟ್ಟುಹಬ್ಬಕ್ಕೆ ಕುಟುಂಬಸ್ಥರ ಜೊತೆ ತೆರಳಿದ್ದೆ. ಅಂಜು ಮನೆಯಲ್ಲಿಯೇ ಇದ್ದಳು. ಈ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಾರ್ಯಕ್ರಮ ಮುಗಿಸಿ ಸಂಜೆ 6 ಗಂಟೆಗೆ ವಾಪಸ್ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಂಜನ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಡೆತ್‌ನೋಟ್‌ನಲ್ಲಿ ಇರುವುದೇ ಒಂದು, ತಾಯಿ ಹೇಳುತ್ತಿರುವುದೇ ಇನ್ನೊಂದು, ಗಂಡ ಹೇಳುತ್ತಿರುವುದು ಮತ್ತೊಂದು. ಆದ್ದರಿಂದ ಈ ಬಗ್ಗೆ ಅನುಮಾನ ಹುಟ್ಟುತ್ತಿದ್ದು, ಸುಬ್ರಹ್ಮಣ್ಯನಗರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net