ಡೋರ್‌ ಲಾಕ್ ಮಾಡದೇ ಕಾರನ್ನು ಬಿಟ್ಟುಬಂದರೆ ಎಚ್ಚರ: ಮೂವರು ಮಕ್ಕಳನ್ನು ಕಳೆದುಕೊಂಡ ಅಪ್ಪ-ಅಮ್ಮ!

car
Published on

ನೆಲ್ವೇಲಿ (ತಮಿಳುನಾಡು): ಡೋರ್‌ ಲಾಕ್‌ ಮಾಡದೇ ಕಾರನ್ನು ಹಾಗೆಯೇ ಬಿಟ್ಟುಬಂದಿದ್ದರಿಂದ ಅದರೊಳಗೆ ಆಡುತ್ತಿದ್ದ ಮಕ್ಕಳು ಉಸಿರುಗಟ್ಟಿ ದಾರುಣವಾಗಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯಲ್ಲಿ ನಡೆದಿದೆ.

ಅಣ್ಣ-ತಂಗಿ ಹಾಗೂ ಇನ್ನೋರ್ವ ಬಾಲಕ ಈ ದುರ್ಘಟನೆಯಲ್ಲಿ ಮೃತಪಟ್ಟಿದ್ದಾರೆ. ಈ ಮಕ್ಕಳನ್ನು ಕಾರಿನ ಬಾಗಿಲು ತೆರೆದು ಇದ್ದುದರಿಂದ ಅದರಲ್ಲಿ ಆಟವಾಡುತ್ತಿದ್ದರು. ಆಕಸ್ಮಿಕವಾಗಿ ಡೋರ್ ಲಾಕ್​ ​ಆಗಿದೆ. ಅವರಿಗೆ ಬಾಗಿಲು ತೆರೆಯಲು ಬರಲಿಲ್ಲ. ಒಳಗಡೆ ಗಾಳಿಯಾಡುತ್ತಿರಲಿಲ್ಲ. ಆದರೆ ಸಮೀಪದಲ್ಲಿ ಯಾರೂ ಇಲ್ಲದ್ದರಿಂದ ಮಕ್ಕಳು ಕೂಗಿಕೊಂಡರೂ ಯಾರಿಗೂ ಕೇಳಿಸಲಿಲ್ಲ.

ಹೀಗಾಗಿ ತುಂಬಾ ಹೊತ್ತು ನರಳಾಡಿದ ಮಕ್ಕಳು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ನಾಗರಾಜ ಎಂಬುವರ ಮಕ್ಕಳಾದ ನಿತೀಶ್ (5), ನಿತೀಶಾ (7) ಹಾಗೂ ಕಬಿಶಾಂತ್ ಸುಧಾಕರ್ ಎಂಬುವರ ಮಗ ಕಬಿಶಾಂತ್(4) ಮೃತ ದುರ್ದೈವಿಗಳು.

ನಾಗರಾಜ್‌ ಅವರ ಸಹೋದರ ಮಣಿಕಂದನ್​​ಗೆ ಸೇರಿದ ಕಾರಿನಲ್ಲಿ ಈ ಮಕ್ಕಳು ಆಟವಾಡುತ್ತಿದ್ದರು. ಆಗ ಸಡನ್‌ ಆಗಿ ಡೋರ್ ಲಾಕ್ ಆಗಿದ್ದರಿಂದ ಮಕ್ಕಳು ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿರುವುದಾಗಿ ಹೇಳಲಾಗಿದೆ. ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಕಾರಿನ ಡೋರ್‌ ಲಾಕ್‌ ಮಾಡಿ ಬರುವುದನ್ನು ಮರೆತು ಇದೇ ರೀತಿ ಮಕ್ಕಳು ಮೃತಪಟ್ಟಿರುವುದು ಹಾಗೂ ಮಕ್ಕಳನ್ನು ಕಾರಿನಲ್ಲಿಯೇ ಬಿಟ್ಟು ಷಾಪಿಂಗ್‌ ಹೋದ ಸಮಯದಲ್ಲಿಯೂ ಉಸಿರುಗಟ್ಟಿ ಸತ್ತಿರುವ ಹಲವಾರು ಉದಾಹರಣೆಗಳಿದ್ದು, ಪಾಲಕರು ಎಚ್ಚರಿಕೆಯಿಂದ ಇರಿ ಎಂದು ಪೊಲೀಸರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net