ಇಬ್ಬರು ಕಂದಮ್ಮಗಳನ್ನು ಬಿಗಿಯಾಗಿ ಅಪ್ಪಿಕೊಂಡು ಬೆಂಕಿಹಚ್ಚಿಕೊಂಡ ಮಹಿಳೆ! ದೊಡ್ಡಬಳ್ಳಾರಪುರದಲ್ಲೊಂದು ದುರಂತ

Fire
Published on

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲೊಂದು ಮಹಾ ದುರಂತ ನಡೆದಿದೆ. ಮಹಿಳೆಯೊಬ್ಬರು ತನ್ನಿಬ್ಬರು ಪುಟಾಣಿ ಮಕ್ಕಳಿಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ತಾಯಿ ಸಂಧ್ಯಾ (33) ಮತ್ತು ಆಕೆಯ 4 ಹಾಗೂ 2 ವರ್ಷದ ಮಕ್ಕಳು ಮೃತಪಟ್ಟಿದ್ದಾರೆ. ಸಂಧ್ಯಾ ಅವರ ವಿವಾಹವು ಶ್ರೀಕಾಂತ‌ ಎನ್ನುವವರ ಜತೆ ಐದು ವರ್ಷಗಳ ಹಿಂದೆ ನಡೆದಿದೆ. ಅತ್ತೆ-ಮಾವನ ಜತೆ ಸಂಧ್ಯಾ ನೆಲೆಸಿದ್ದರು. ಸ್ಥಳೀಯರು ಹೇಳುವ ಪ್ರಕಾರ ಕುಟುಂಬದಲ್ಲಿ ಯಾವುದೇ ಮನಸ್ತಾಪ ಇರಲಿಲ್ಲ. ಎಲ್ಲರೂ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ.

ಆದರೆ ಇಂಥ ಭೀಕರ ಕೃತ್ಯ ಎಸಗಲು ಕಾರಣವೇನು ಇತ್ತೋ ಗೊತ್ತಿಲ್ಲ. ಈ ತಾಯಿ ಇಂಥದ್ದೊಂದು ಕಠೋರ ನಿರ್ಧಾರ ತೆಗೆದುಕೊಂಡು ಇಬ್ಬರು ಕರುಳಕುಡಿಗಳನ್ನೂ ಜೀವಂತವಾಗಿ ಸುಟ್ಟುಹಾಕಿದ್ದಾಳೆ. ಐದು ಲೀಟರ್‌ ಪೆಟ್ರೋಲ್ ಖರೀದಿಸಿ ಎಲ್ಲರ ಮೈಮೇಲೂ ಅದನ್ನು ಸುರಿದು ಬೆಂಕಿ ಹಚ್ಚಿಕೊಂಡಿದ್ದಾಳೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ಘಟನೆ ವೇಳೆ ತನ್ನಿಬ್ಬರು ಮಕ್ಕಳನ್ನು ಆಕೆ ಬಿಗಿಯಾಗಿ ಅಪ್ಪಿ ಹಿಡಿದುಕೊಂಡಿರುವುದಾಗಿ ಹೇಳಲಾಗಿದೆ.

ಬೆಂಕಿಯ ಕೆನ್ನಾಲಿಗೆ ವ್ಯಾಪಿಸುತ್ತಿದ್ದಂತೆಯೇ ಸ್ಥಳೀಯರು ಬಂದು ಅವರನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೇ ಎಲ್ಲರೂ ಮೃತಪಟ್ಟಿದ್ದಾರೆ. ತನಿಖೆ ನಡೆದಿದ್ದು, ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net