ಡಿ.ಜೆ ಹಳ್ಳಿ ಗಲಭೆ: ಪೊಲೀಸರ ಪರವೆಂದು ನಾಟಕವಾಡಿ ಗಲಭೆ ಸೃಷ್ಟಿಸಿದವನ ಬಂಧನ

DJhalli
DJhalli
Published on

ಬೆಂಗಳೂರು: ಬೆಂಗಳೂರಿನ ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದಾಗಲೇ ಪ್ರಮುಖ ಆರೋಪಿ ಎಸ್​ಡಿಪಿಐ ಪಕ್ಷದ ಮುಜಾಮಿಲ್ ಪಾಷನನ್ನು ಬಂಧಿಸಲಾಗಿದ್ದು, ಇದರ ಬೆನ್ನಲ್ಲೇ ಪಕ್ಷದ ಸದಸ್ಯನಾಗಿರುವ ಅಯಾಜ್‌ ಎಂಬುವವನನ್ನು ಪೊಲೀಸರು ಬಂಧಿಸಿದ್ದಾರೆ.

ಕುತೂಹಲದ ಸಂಗತಿ ಎಂದರೆ, ಈತ ತಾನು ಪೊಲೀಸರ ಪರವಾಗಿರುವುದಾಗಿ ನಂಬುವಂತೆ ಮಾಡಿದ್ದ. ತಾನು ಗಲಭೆಯನ್ನು ನಿಯಂತ್ರಿಸಲು ಸಹಾಯ ಮಾಡುವಂತೆ ಪೊಲೀಸರ ಪರವಾಗಿ ನಿಂತುಕೊಂಡಿದ್ದ.

ನಂತರ ಗಲಭೆ ನಿಯಂತ್ರಣಕ್ಕೆ ಮೈಕ್‌ ಅಳವಡಿಸಿದ ಬಳಿಕ ಗಲಾಟೆಯಲ್ಲಿ ತಾನೂ ಭಾಗಿಯಾಗಿ ಗಲಭೆಗೆ ಪ್ರಚೋದನೆ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ. ಮಾತ್ರವಲ್ಲದೇ ಗಲಭೆ ಸೃಷ್ಟಿಸಲು ನೂರಕ್ಕೂ ಅಧಿಕ ಮಂದಿಯನ್ನು ಕರೆದುಕೊಂಡು ಬಂದಿದ್ದು, ಗಲಭೆ ಸೃಷ್ಟಿಸಲು ಕುಮ್ಮಕ್ಕು ನೀಡಿರುವ ವಿಷಯ ಬೆಳಕಿಗೆ ಬಂದಿದೆ.

ಗಲಭೆ ವೇಳೆ ನಡೆಸಲಾಗಿರುವ ವಿಡಿಯೋ ಚಿತ್ರೀಕರಣದ ಆಧಾರದ ಮೇಲೆ ಈತನನ್ನು ಬಂಧಿಸಿರುವ ಪೊಲೀಸರು, ಮುಂದಿನ ವಿಚಾರಣೆ ನಡೆಸುತ್ತಿದ್ದಾರೆ.

ಇದಾಗಲೇ ಎಸ್​ಡಿಪಿಐ ಪಕ್ಷದಿಂದ ವಾರ್ಡ್ ನಂಬರ್ 60ರ ಕಾರ್ಪೊರೇಟರ್ ಚುನಾವಣೆಗೆ ಸ್ಪರ್ಧಿಸಿದ್ದ ಮುಜಾಮಿಲ್ ಪಾಷ ಬಂಧಿಸಲಾಗಿದ್ದು, ಈತನ ಬಗ್ಗೆಯೂ ವಿಚಾರಣೆ ಮುಂದುವರೆದಿದೆ. ಮುಜಾಮಿಲ್ ಪಾಷ, ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಾಲಗಿರುವ ಗಲಭೆ ಪ್ರಕರಣದ ಎ ಒನ್ ಅರೋಪಿ ಎನ್ನಲಾಗಿದ್ದು, ಅಯಾಜ್‌ನಲ್ಲಿ ಎ-2 ಆರೋಪಿ ಎಂದು ದಾಖಲು ಮಾಡಿಕೊಳ್ಳಲಾಗಿದೆ.

ಡಿಜೆ ಹಳ್ಳಿ ಗಲಭೆ ಸಂಬಂಧ ಹಿರಿಯ ಆಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಯಲಿದೆ. ಇಬ್ಬರು ಹೆಚ್ಚುವರಿ‌ ಪೊಲೀಸ್ ಆಯುಕ್ತರು ಹಾಗೂ ಓರ್ವ ಡಿಸಿಪಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಪ್ರಕರಣದ ಹಿಂದೆ ಯಾವ ಸಂಘಟನೆ ಹಾಗೂ ಯಾರ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಕೆಲವು ರೌಡಿಗಳು ಘಟನೆಯಲ್ಲಿ ಭಾಗಿಯಾಗಿರೋ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹಳೇ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪಟ್ಟಿ ಮಾಡಿ ಬಂಧನಕ್ಕೆ ಬಲೆ ಬೀಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net