

ಕಾರ್ಕಳ: ಕಳೆದ ಏಪ್ರಿಲ್ 11ರಂದು ಉಡುಪಿಯ ಲಾಡ್ಜ್ನಲ್ಲಿ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ರಾಜಕೀಯ ವಲಯದಲ್ಲಿ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರ ಮೇಲೆ 40% ಕಮಿಷನ್ ಆರೋಪ ಕೂಡ ಕೇಳಿಬಂದಿತ್ತು.
ಆತ್ಮಹತ್ಯೆಗೆ ಶರಣಾಗುವ ಮುನ್ನ ಸಂತೋಷ್ ಪಾಟೀಲ್ ನನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ವಾಟ್ಸ್ಆ್ಯಪ್ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿತ್ತು. ಸಂತೋಷ್ ಅವರ ಸಹೋದರ ಪ್ರಶಾಂತ್ ಅವರು ಈಶ್ವರಪ್ಪ ವಿರುದ್ಧ ದೂರು ಸಲ್ಲಿಸಿದ್ದರು. 'ನನ್ನ ಸಹೋದರ ಸಂತೋಷ್ ಹಿಂಡಲಗಾ ಪಂಚಾಯತ್ ವ್ಯಾಪ್ತಿಯ ಲಕ್ಷ್ಮೀದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿ ಕೆಲಸ ಮಾಡಿದ್ದ. 4 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಚರಂಡಿ ಫೇವರ್ಸ್ ಜೋಡಣೆ ಕಾಮಗಾರಿ ಮಾಡಿಸಿದ್ದ. ಈ ಹಣವನ್ನು ಬಿಡುಗಡೆ ಮಾಡಲು ಸಚಿವ ಈಶ್ವರಪ್ಪ ಶೇ. 40 ಕಮಿಷನ್ಗೆ ಬೇಡಿಕೆ ಇಟ್ಟಿದ್ದರು' ಎಂದು ಆರೋಪಿಸಿದ್ದರು.
'ಕಮಿಷನ್ ಬಗ್ಗೆ ಪತ್ನಿ ಜಯಾ ಮತ್ತು ನನ್ನ ಬಳಿ ತಿಳಿಸಿದ್ದ. ಅಲ್ಲದೆ, ಈ ಹಿಂದೆ ಪತ್ರಿಕಾಗೋಷ್ಠಿ ನಡೆಸಿ ತನ್ನ ಜೀವಕ್ಕೇನಾದರೂ ಅಪಾಯವಾದರೆ ನೀವೇ ಕಾರಣ ಎಂದು ಈಶ್ವರಪ್ಪ ವಿರುದ್ಧ ಸಂತೋಷ್ ಹೇಳಿದ್ದ. ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಮನವಿ ನೀಡಿದ್ದ. ಆದರೆ, ಯಾವುದಕ್ಕೂ ಸ್ಪಂದನೆ ಸಿಗದೆ ಮತ್ತು ಹಣ ಬಿಡುಗಡೆಯಾಗದೇ ಮನನೊಂದಿದ್ದ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಕಾರಣರಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸಬೇಕು' ಎಂದು ಪ್ರಶಾಂತ್ ಪಾಟೀಲ್ ದೂರಿನಲ್ಲಿ ತಿಳಿಸಿದ್ದರು.
ಇದರ ಅನ್ವಯ ತನಿಖೆ ಕೈಗೊಂಡಿದ್ದ ಪೊಲೀಸರು ಇದೀಗ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದಾರೆ. ಇದರಲ್ಲಿ ಸಚಿವ ಈಶ್ವರಪ್ಪ ಅವರಿಗೆ ಕ್ಲೀನ್ಚಿಟ್ ನೀಡಲಾಗಿದೆ. ಕೊಲೆ ಅಥವಾ ಕೊಲೆ ಪ್ರಚೋದನೆ ಎಂಬುದಕ್ಕೆ ಸೂಕ್ತ ಸಾಕ್ಷಿಗಳು ಇಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಎಲ್ಲಾ ತಾಂತ್ರಿಕ ಸಾಕ್ಷಿಗಳನ್ನು ಸಂಗ್ರಹಿಸಿ ಕೋರ್ಟ್ಗೆ ಸಲ್ಲಿಕೆ ಮಾಡಲಾಗಿದೆ. ಸಿಸಿಟಿವಿ ಫುಟೇಜ್, ವೀಡಿಯೋ, ಆಡಿಯೋ, ಮೊಬೈಲ್ ಸಂದೇಶಗಳ ಜತೆಗೆ ಬ್ಯಾಂಕ್ ದಾಖಲೆ, ಗುತ್ತಿಗೆ ವಿವರ, ಕುಟುಂಬಸ್ಥರು, ಸ್ನೇಹಿತರ ಹೇಳಿಕೆಗಳ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಕೋರ್ಟ್ಗೆ ನೀಡಲಾಗಿದೆ.
ಈಶ್ವರಪ್ಪ , ಈಶ್ವರಪ್ಪ ಕಡೆಯವರಿಂದ ಬೆದರಿಕೆ ಬಂದಿದೆ ಎಂಬುದಕ್ಕೆ ದಾಖಲೆಗಳ ಕೊರತೆ ಇರುವುದಾಗಿ ಅದರಲ್ಲಿ ತಿಳಿಸಲಾಗಿದೆ (ದಿಗ್ವಿಜಯ ನ್ಯೂಸ್)