

ಬೆಂಗಳೂರು: ಭಾರತದ ಶಕ್ತಿಯನ್ನು ವಿಶ್ವಕ್ಕೆ ಸಾರಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2025ರೊಳಗೆ ಐದು ಟ್ರಿಲಿಯನ್ ಆರ್ಥಿಕತೆ ಸಾಧಿಸುವ ಗುರಿ ಹೊಂದಿದ್ದಾರೆ. ಇದರಲ್ಲಿ ಒಂದು ಟ್ರಿಲಿಯನ್ ಪಾಲು ಕರ್ನಾಟಕದ್ದಾಗಿರಬೇಕು ಎಂದು ರಾಜ್ಯ ಸರ್ಕಾರ ಬಯಸಿದ್ದು, ವಿದೇಶದಲ್ಲಿರುವ ಕನ್ನಡಿಗರು ಸಹಕರಿಸಿ ಕೈಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ನ್ಯೂಯಾರ್ಕ್ನಲ್ಲಿ ಕನ್ನಡ ಕೂಟ ಭಾನುವಾರ ರಾತ್ರಿ ಆಯೋಜಿಸಿದ್ದ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ವರ್ಲ್ಡ್ ಲಾರ್ಜೆಸ್ಟ್ ಇಂಡಿಯಾ ಪರೇಡ್ಗೆ ವರ್ಚುವಲ್ ವೇದಿಕೆ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಭಾರತೀಯರು ಅದರಲ್ಲೂ ಕನ್ನಡಿಗರಿಗೆ ಅಮೆರಿಕ ಮತ್ತಿತರ ದೇಶಗಳಲ್ಲಿ ಬುದ್ಧಿವಂತರು, ವೈಜ್ಞಾನಿಕವಾಗಿ ಚಿಂತನೆ ನಡೆಸುವವರು, ತಂತ್ರಜ್ಞಾನದ ಮೇಲೆ ಹಿಡಿತ ಸಾಧಿಸಿದವರು ಎಂಬ ಗೌರವ, ಅಭಿಮಾನವಿದೆ ಎಂದರು.
ಈ ಘನತೆ-ಗೌರವ ಎತ್ತಿ ಹಿಡಿಯುವ ಬದುಕು ಮುಂದುವರಿಸಿ ಭವಿಷ್ಯ ಉಜ್ವಲಗೊಳಿಸಿಕೊಳ್ಳುವ ಜತೆಗೆ ಕರ್ನಾಟಕದಲ್ಲಿರುವ ನಿಮ್ಮ ಜ್ಞಾನ, ಸಂಸ್ಕಾರ ಹಾಗೂ ಸಂಬಂಧದ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ತಂತ್ರಜ್ಞಾನದ ಹಬ್
ಹಿಂದೆ ಭೂಮಿ ಇದ್ದವರು ಪ್ರಪಂಚ ಆಳಿದರು. ನಂತರ ಬಂಡವಾಳ ಉಳ್ಳವರು ವ್ಯಾಪಾರದ ಮೂಲಕ ತಮ್ಮ ಸಾಮ್ರಾಜ್ಯ ವಿಸ್ತರಿಸಿದರು. ಈಗ ಭೂಮಿ, ಬಂಡವಾಳ ಬೇಕಾಗಿಲ್ಲ, ಜ್ಞಾನವೊಂದಿದ್ದರೆ ಸಾಕು. ನೀವು ಹೊಂದಿರುವ ಜ್ಞಾನದ ಬಲದಿಂದ ತಂತ್ರಜ್ಞಾನ ದುಡಿಸಿಕೊಂಡು ದೂರದ ದೇಶದಲ್ಲಿ ನೆಲೆಯೂರಲು ಸಾಧ್ಯವಾಗಿದೆ.
ಕರ್ನಾಟಕ ಜಾಗತಿಕವಾಗಿ ತಂತ್ರಜ್ಞಾನದ ಹಬ್ ಆಗಿ ಗುರುತಿಸಿಕೊಂಡಿದೆ. ಭಾರತಕ್ಕೆ ಹರಿದುಬಂದಿರುವ ಒಟ್ಟು ವಿದೇಶಿ ನೇರ ಬಂಡವಾಳದಲ್ಲಿ ಶೇಕಡ 38ರಷ್ಟು ಕರ್ನಾಟಕದಲ್ಲಿ ಹೂಡಿಕೆಯಾಗಿದೆ. ಸ್ಟಾರ್ಟ್ ಅಪ್ಗಳು, ಐಟಿ ಬಿಟಿ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ವಿಶ್ವದ ನಾಲ್ಕು ಡೆಕಾ ಕಾರ್ನ್ಗಳಲ್ಲಿ ಮೂರು, 100 ಯೂನಿಕಾರ್ನ್ಗಳಲ್ಲಿ 24 ಕರ್ನಾಟಕದಲ್ಲಿವೆ ಎಂದು ವಿವರಿಸಿದ ಅವರು, ಎಲ್ಲಕ್ಕಿಂತ ಮಿಗಿಲಾಗಿ ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು ಹಿರಿಮೆ-ಗರಿಮೆಗೆ ಸಾಕ್ಷಿ ಎಂದು ಸಿಎಂ ಬೊಮ್ಮಾಯಿ ಪ್ರಶಂಸಿಸಿದರು.