

ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾಗಿರುವ ವಿಧಾನಸೌಧದಲ್ಲಿ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಎಲ್ಲ ಅಧಿಕಾರಿಗಳು, ಸಿಬ್ಬಂದಿ ಕಾರ್ಯಕ್ಷಮತೆ, ದಕ್ಷತೆಯಿಂದ ಮಾಡುವ ಕೆಲಸ ತಳಮಟ್ಟಕ್ಕೆ ತಲುಪುತ್ತದೆ. ಆಗ ವಿಧಾನಸೌಧದ ಮಹಾದ್ವಾರದ ಮೇಲೆ ಬರೆದಿರುವ ' ಸರ್ಕಾರದ ಕೆಲಸ ದೇವರ ಕೆಲಸ'ವಾಗಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿತನುಡಿದರು.
ಸರ್ದಾರ್ ವಲ್ಲಭಭಾಯ್ ಪಟೇಲ್ ಜಯಂತಿ ನಿಮಿತ್ತ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ರಾಷ್ಟ್ರೀಯ ಏಕತಾ ದಿವಸದ ಪ್ರತಿಜ್ಞಾವಿಧಿ ಭಾನುವಾರ ಬೋಧಿಸಿದ ಅವರು, ಸರ್ಕಾರ ಮಾತ್ರ ರಾಜ್ಯ ಹಾಗೂ ದೇಶವಾಗದು. ಜನರ ಶ್ರೇಯೋಭಿವೃದ್ಧಿ ಮುಖ್ಯವಾಗಿದ್ದು, ಎಲ್ಲರೂ ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದರು.
ಅಪಾರ ಕಷ್ಟ-ನಷ್ಟ, ತ್ಯಾಗ-ಬಲಿದಾನದಿಂದ ಸ್ವಾತಂತ್ರ್ಯ ಗಳಿಸಿದ್ದೇವೆ ಹಾಗೂ ಒಕ್ಕೂಟ ವ್ಯವಸ್ಥೆಯ ಭಾರತ, ಗಣರಾಜ್ಯವಾಗುವ ನಿಟ್ಟಿನಲ್ಲಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ದಿಟ್ಟ ನಿರ್ಧಾರ, ಮುತ್ಸದ್ದಿತನ ನಿರ್ಣಾಯಕ ಪಾತ್ರವಹಿಸಿದೆ ಎಂದು ಸ್ಮರಿಸಿದ ಬೊಮ್ಮಾಯಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಬಲಿದಾನ ದಿನವೂ ಆಗಿದೆ ಎಂದರು.
ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಭಿವೃದ್ಧಿ ಆಯುಕ್ತೆ ವಂದಿತಾ ಶರ್ಮಾ, ವಿವಿಧ ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.