

ಬೆಂಗಳೂರು: ಸಾರ್ವಜನಿಕ ಬದುಕಿನಲ್ಲಿ ಸತ್ಯಸಂಧತೆ, ಪ್ರಾಮಾಣಿಕತೆ, ಸೂಕ್ಷ್ಮಸಂವೇದನಾಶೀಲತೆಯ ಪ್ರತೀಕವಾಗಿದ್ದ ಲಾಲ್ ಬಹಾದೂರ್ ಶಾಸ್ತ್ರಿ ಅವರು, ಜೀವನ ಮತ್ತು ಸಾಧನೆ ಆದರ್ಶಪ್ರಾಯವಾದುದು ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.
ಪ್ರಧಾನಿಯಾಗಿದ್ದ ಅವಧಿಯಲ್ಲಿ ಯುದ್ಧ ಮತ್ತು ಬರಗಾಲ ಎರಡನ್ನೂ ಸಮರ್ಥವಾಗಿ ನಿಭಾಯಿಸಿದರು. ಅವರ ಜೈಜವಾನ್, ಜೈಕಿಸಾನ್ ಉದ್ಘೋಷ ಚಿರಕಾಲವಾಗಿರುತ್ತದೆ ಎಂದರು.
ಮಾಜಿ ಪ್ರಧಾನಿ ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಗಾಂಧಿ ಜಯಂತಿ ನಿಮಿತ್ತ ವಿಧಾನಸೌಧ ಆವರಣದಲ್ಲಿ ಮಹಾನ್ ನಾಯಕರಿಬ್ಬರ ಪ್ರತಿಮೆ ಮುಂದೆ ಅವರಿಬ್ಬರ ಭಾವಚಿತ್ರಗಳಿಗೆ ಪ್ರತ್ಯೇಕವಾಗಿ ಪುಷ್ಪ ನಮನ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಗಾಧಿಯವರು ಕರ್ನಾಟಕದಲ್ಲಿ ಹಲವೆಡೆ ಸಂಚರಿಸಿ, ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡರೆ, ಶಾಸ್ತ್ರಿಯವರು ಆಲಮಟ್ಟಿ ಅಣೆಕಟ್ಟೆ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದು, ಅದೀಗ ಉತ್ತರ ಕರ್ನಾಟಕದ ಜೀವಾಳವಾಗಿದೆ ಎಂದು ಬೊಮ್ಮಾಯಿ ಹೇಳುವ ಮೂಲಕ ಮಹನೀಯರಿಬ್ಬರ ನಾಡಿನ ನಂಟು ಸ್ಮರಿಸಿದರು.
ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆಗಿಂತ ಹೆಚ್ಚು ಜನರಿಂದ ಉತ್ಪಾದನೆಯಾಗಬೇಕು ಎಂಬ ಗಾಂಧಿಯವರ ಪ್ರಣೀತಸೂತ್ರ ಈಗ ಹೆಚ್ಚು ಪ್ರಸ್ತುತವಾಗಿದ್ದು, ಜನರ ಕೈಗೆ ಸಿಗಬೇಕು ಎನ್ನುವುದು ಈ ಸೂತ್ರದ ಆಶಯವಾಗಿದೆ ಎಂದರು. ಇವರ ರಾಮರಾಜ್ಯ ಮತ್ತು ಗ್ರಾಮಸ್ವರಾಜ್ಯ ಪರಿಕಲ್ಪನೆಗಳನ್ನು ಅನುಷ್ಠಾನಕ್ಕೆ ತರಬೇಕಾಗಿದೆ. ಗ್ರಾಮಗಳ ಅಭಿವೃದ್ಧಿಯಿಂದ ಭಾರತದ ಪ್ರಗತಿ ಸಾಧ್ಯವೆಂಬ ಅವರ ಕಾಳಜಿ, ಮಾನವೀಯತೆ, ವೈಯಕ್ತಿಕ ಹಾಗೂ ಸಾರ್ವತ್ರಿಕ ಬದುಕಿನಲ್ಲಿ ಪರಿಶುದ್ಧತೆ ಅನನ್ಯವಾದುದು ಎಂದು ಬೊಮ್ಮಾಯಿ ಹೇಳಿದರು.
ಸಚಿವರಾದ ಗೋವಿಂದ ಕಾರಜೋಳ, ಎಂಟಿಬಿ ನಾಗರಾಜ್, ಹಾಲಪ್ಪ ಆಚಾರ್, ವಿ.ಸುನೀಲ್ ಕುಮಾರ್, ಸಂಸದ ಶಿವಕುಮಾರ್ ಉದಾಸಿ ಮತ್ತಿತರರು ಇದ್ದರು.