

ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ಅದರಲ್ಲಿಯೂ ವಾಟ್ಸ್‌ಆ್ಯಪ್ ಮೂಲಕ ಸುಳ್ಳು ಸುದ್ದಿ ಹರಡುವುದು, ದೇಶವಿರೋಧಿ ಸಂದೇಶಗಳನ್ನು ಕಳುಹಿಸುವುದು ಇಲ್ಲವೇ ಭದ್ರತೆಗೆ ಅಪಾಯ ಉಂಟು ಮಾಡುವ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮಕ್ಕೆ ಇದಾಗಲೇ ವಾಟ್ಸ್‌ಆ್ಯಪ್ ಕಂಪೆನಿ ಮುಂದಾಗಿದೆ.
ಇದರ ಅನ್ವಯ ಹೊಸ ಐಟಿ ನಿಯಮಗಳು 2021 ಕೂಡ ಇದಾಗಲೇ ಚಾಲ್ತಿಯಲ್ಲಿ ಬಂದಿದೆ. ಈ ಹಿನ್ನೆಲೆಯಲ್ಲಿ ಕಂಪೆನಿ ಬಳಕೆದಾರರ ಮೇಲೆ ಹದ್ದಿನ ಕಣ್ಣು ಇಟ್ಟಿದೆ. ಇಂಥ ಮೆಸೇಜ್‌ಗಳನ್ನು ಹರಿಬಿಡುವವರ ಮೇಲೆ ಶಿಸ್ತಿನ ಕ್ರಮ ತೆಗೆದುಕೊಳ್ಳುತ್ತಿರುವ ವಾಟ್ಸ್‌ಆ್ಯಪ್ ಇದಾಗಲೇ ಸುಮಾರು 50 ಲಕ್ಷ ಖಾತೆಗಳನ್ನು ಭಾರತದಲ್ಲಿ ನಿಷೇಧ ಮಾಡಲಾಗಿದೆ.
ಇದು ಕೇವಲ ಮೂರು ತಿಂಗಳಿನಲ್ಲಿ ಬ್ಯಾನ್ ಮಾಡಿರುವ ಖಾತೆಗಳ ಸಂಖ್ಯೆಯಾಗಿದೆ. ಫೇಸ್ಬುಕ್ ಒಡೆತನದ ಕಂಪನಿ ವಾಟ್ಸ್‌ಆ್ಯಪ್ ಕಂಪೆನಿ ತನ್ನ ಎರಡನೇ ಮಾಸಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಅಂಶ ಬಹಿರಂಗಗೊಂಡಿದೆ.
ಜೂನ್ 16 ರಿಂದ ಜುಲೈ 31 ರ ಅವಧಿಯಲ್ಲಿ ವಾಟ್ಸ್‌ಆ್ಯಪ್ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಭಾರತದಲ್ಲಿ 30.2 ಲಕ್ಷ ಖಾತೆಗಳನ್ನು ನಿಷೇಧಿಸಿತ್ತು. ಇದೀಗ ಅಂದರೆ ಆಗಸ್ಟ್ 1 ರಿಂದ ಆಗಸ್ಟ್ 31 ರ 30 ದಿನಗಳ ಅವಧಿಯಲ್ಲಿ 20.7 ಲಕ್ಷ ಖಾತೆಗಳು ಬ್ಯಾನ್ ಆಗಿವೆ.
‘ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೈತಿಕತೆ ಸಂಹಿತೆ) ನಿಯಮಗಳು 2021 ರ ಅಡಿ ಈ ಕ್ರಮ ತೆಗೆದುಕೊಳ್ಳಲಾಗಿದೆ. ಸುಳ್ಳು ಸಂದೇಶ, ದೇಶದ ಭದ್ರತೆಗೆ ಧಕ್ಕೆ ತರುವ, ಧಾರ್ಮಿಕ ನಿಂದನೆ ಸೇರಿದಂತೆ ಅನಗತ್ಯ ಸಂದೇಶಗಳನ್ನು ಹರಡುತ್ತಿರುವ ಕುರಿತು ಸಾವಿರಾರು ಮೇಲ್‌ಗಳನ್ನು ನಾವು ಸ್ವೀರಿಸಿದ್ದೇವೆ. ಇದರ ಹೊರತಾಗಿಯೂ ವಾಟ್ಸ್‌ಆ್ಯಪ್ ಕಂಪೆನಿ ಪ್ರತಿಯೊಂದು ಸಂದೇಶಗಳ ಮೇಲೆ ಕಣ್ಣಿಡುತ್ತಿದ್ದು, ಇಂಥವರ ಖಾತೆಗಳನ್ನು ಬ್ಯಾನ್ ಮಾಡಲಾಗುತ್ತಿದೆ. ಬಳಕೆದಾರರು ನೀಡಿರುವ ದೂರುಗಳ ವಿವರಗಳನ್ನು ಮತ್ತು ವಾಟ್ಸ್‌ಆ್ಯಪ್ ತೆಗೆದುಕೊಂಡ ಕ್ರಮಗಳ ಅಡಿಯಲ್ಲಿ ಈ ಮೂರು ತಿಂಗಳಿನಲ್ಲಿ 50 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಲಾಗಿದೆ’ ಎಂದು ಕಂಪೆನಿ ಹೇಳಿದೆ.