ಅವಿವಾಹಿತೆಗೆ ಡೆಲಿವರಿ ಮಾಡಿಸಿ ಮಗು ಮಾರಿದ ಕೊಪ್ಪದ ವೈದ್ಯ- ಘಟನೆ ಬೆಳಕಿಗೆ ಬಂದದ್ದೇ ಕುತೂಹಲ...

chikmagaluru
Published on

ಚಿಕ್ಕಮಗಳೂರು: ಮದುವೆಯಾಗದಿದ್ದರೂ ಗರ್ಭಧರಿಸಿದ್ದ ಯುವತಿಯೊಬ್ಬಳಿಗೆ ಡೆಲಿವರಿ ಮಾಡಿಸಿ, ಆಕೆಗೆ ಏನೇನೋ ಸಬೂಬು ಹೇಳಿ ಕಳಿಸಿಕೊಟ್ಟು, ಮಗುವನ್ನು 50 ಸಾವಿರ ರೂಪಾಯಿಗೆ ವೈದ್ಯನೊಬ್ಬ ಮಾರಾಟ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ.

ಕೊಪ್ಪ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯ ಡಾ. ಬಾಲಕೃಷ್ಣ ಎಂಬುವವರ ಮೇಲೆ ಹೆಣ್ಣು ಮಗುವನ್ನ ಮಾರಾಟ ಮಾಡಿರುವ ಆರೋಪವಿದ್ದು, ಈ ಘಟನೆ ನಡೆದು ಎಂಟು ತಿಂಗಳ ನಂತರ ಬೆಳಕಿಗೆ ಬಂದಿದೆ.

ಗರ್ಭಧರಿಸಿದ್ದ ಅವಿವಾಹಿತೆ ತೀರ್ಥಹಳ್ಳಿಯವಳು. ಕಳೆದ ಮಾರ್ಚ್ 14ರಂದು ಹೆರಿಗೆ ನೋವು ಹೆಚ್ಚಿ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಡೆಲವರಿ ಮಾಡಿಸಿದ್ದ ಅಲ್ಲಿಯ ವೈದ್ಯ ಡಾ.ಬಾಲಕೃಷ್ಣ ಅವರಿಗೆ ಈಕೆಯ ಮದುವೆಯಾಗಿಲ್ಲ ಎಂದು ತಿಳಿದಿದೆ. ಆದ್ದರಿಂದ ಮದುವೆಯಾಗದ ಕಾರಣ ಮಗುವನ್ನು ಆಸ್ಪತ್ರೆಯಲ್ಲಿಯೇ ಬಿಟ್ಟುಹೋಗಬೇಕು ಎಂದಿದ್ದಾರೆ.

ಇದಕ್ಕೆ ಒಪ್ಪಿಕೊಂಡಿದ್ದಾಳೆ ಯುವತಿ. ಆಗ ವೈದ್ಯರು ಆಕೆಗೆ ಐದು ಸಾವಿರ ರೂಪಾಯಿ ನೀಡಿ ಸಾಗಹಾಕಿದ್ದಾರೆ. ಈ ನಡುವೆಯೇ ತಮಿಳುನಾಡಿನಿಂದ ಬಂದು ಶೃಂಗೇರಿಯಲ್ಲಿ ವಾಸವಿದ್ದ ಪ್ರೇಮಾ ಅವರಿಗೆ ಮಗು ಇಲ್ಲದ ಹಿನ್ನೆಲೆಯಲ್ಲಿ ವೈದ್ಯರು ಮಾರಾಟ ಮಾಡಿದ್ದಾರೆ.

ವಿಷಯ ಬೆಳಕಿಗೆ ಬಂದದ್ದೇ ಕುತೂಹಲ:

ಈ ವಿಷಯ ಎಂಟು ತಿಂಗಳ ಬಳಿಕ ಬೆಳಕಿಗೆ ಬಂದಿದೆ. ಅದಕ್ಕೆ ಕಾರಣ, ಇದೇ ಯುವತಿ. ಮಗುವನ್ನು ಬಿಟ್ಟುಬಂದ ನಂತರ ತಪ್ಪಿತಸ್ಥ ಮನೋಭಾವದಿಂದ ಬಳಲುತ್ತಿದ್ದ ಯುವತಿ ಖಿನ್ನತೆ ಜಾರಿದ್ದಾಳೆ. ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ನೀಡುತ್ತಿದ್ದಾಗ ಮಗು ಮಗು ಎಂದು ಕನವರಿಸುತ್ತಿದ್ದಳು.

ಸಂಶಯಗೊಂಡ ಅಲ್ಲಿಯ ವೈದ್ಯರು ವಿಷಯ ಕೇಳಿದ್ದಾರೆ. ಆಗಲೇ ಆಕೆ ಎಲ್ಲವನ್ನೂ ಬಾಯಿಬಿಟ್ಟಿದ್ದಾಳೆ. ಕೂಡಲೇ ವೈದ್ಯರು ಶಿವಮೊಗ್ಗದ ಮಕ್ಕಳ ಪಾಲನ ಕೇಂದ್ರದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಲ್ಲಿಂದ ಚಿಕ್ಕಮಗಳೂರು ಅಧಿಕಾರಿಗಳ ಗಮನಕ್ಕೆ ಬಂದಿದೆ.

ವೈದ್ಯರನ್ನು ವಿಚಾರಿಸಿದಾಗ ಅವರು ತಮಗೆ ವಿಷಯವೇ ಗೊತ್ತಿಲ್ಲ ಎಂದಿದ್ದಾರೆ. ಪೊಲೀಸರು ಆಸ್ಪತ್ರೆಯ ರೆಜಿಸ್ಟರ್​ ಚೆಕ್​ ಮಾಡಿದ್ದಾರೆ. ಯುವತಿ ಹೇಳಿದ್ದ ದಿನದ ರಿಜಿಸ್ಟರ್​ ಚೆಕ್​ ಮಾಡಿದಾಗ ಅಲ್ಲಿ ಆಕೆಯ ಹೆಸರು ಇರಲಿಲ್ಲ. ಬದಲಿಗೆ ಶೃಂಗೇರಿಯ ಪ್ರೇಮಾ ಎಂಬುವವರು ಹೆಸರು ಇತ್ತು.

ತನಿಖೆ ಇನ್ನಷ್ಟು ಚುರುಕುಗೊಳಿಸಿ, ಪ್ರೇಮಾ ಅವರ ಬಗ್ಗೆ ವಿಚಾರಣೆ ಮಾಡಿದಾಗ ಅವರು ಗರ್ಭವತಿಯೇ ಆಗದಿರುವುದು ತಿಳಿದುಬಂತು. ಆದರೆ ಅವರ ಮನೆಯಲ್ಲಿ ಮಗುವಿತ್ತು. ನಂತರ ವಿಚಾರಣೆ ತೀವ್ರಗೊಳಿಸಿದಾಗ ಮಗುವನ್ನು ತಾವು 50 ಸಾವಿರ ರೂಪಾಯಿ ಕೊಟ್ಟು ಪಡೆದಿರುವುದಾಗಿ ಅವರು ಒಪ್ಪಿಕೊಂಡಿದ್ದಾರೆ.

ದತ್ತು ಕಾಯ್ದೆ ಅನ್ವಯ ಮಗುವನ್ನು ಮಾರಾಟ ಮಾಡದೇ, ವೈದ್ಯರು ಗುಟ್ಟಾಗಿ ಮಗು ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ ವೈದ್ಯ, ದಾದಿಯರು ಹಾಗೂ ಪ್ರೇಮಾ ವಿರುದ್ಧ ಕೇಸ್​ ದಾಖಲು ಮಾಡಲಾಗಿದೆ. ಮಗುವಿನ ಮಾರಾಟದ ಬಗ್ಗೆ ಆರೋಪಿಗಳು ತಪ್ಪು ಒಪ್ಪಿಕೊಂಡಿದ್ದಾರೆ. ಮಗುವನ್ನು ವಾಪಸ್​ ಪಡೆದುಕೊಳ್ಳಲಾಗಿದ್ದು, ಅದನ್ನು ಚಿಕ್ಕಮಗಳೂರಿನ ಬಾಲಮಂದಿರಕ್ಕೆ ಬಿಡಲಾಗಿದೆ.

ಸದ್ಯ ಮಗುವಿನ ತಾಯಿ ಮಾನಸಿಕ ಖಿನ್ನತೆಗೆ ಒಳಗಾಗಿ ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net