

ಚಿಕ್ಕಬಳ್ಳಾಪುರ: ಇದೇ 12ರಂದು ನಿಗೂಢವಾಗಿ ಮೃತಪಟ್ಟಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಗುಟ್ಟಹಳ್ಳಿ ಆದಿಶಕ್ತಿ ಕೋಳಾಲಮ್ಮದೇವಿ ಧರ್ಮದರ್ಶಿ ಮಾತೃ ಸ್ವರೂಪಿಣಿ ಅಮ್ಮ ಮತ್ತು ಅರ್ಚಕ ಲಕ್ಷ್ಮೀಪತಿ ಅವರ ಸಾವಿನ ರಹಸ್ಯ ಇದೀಗ ಬಯಲಾಗಿದೆ.
ಇವರಿಬ್ಬರೂ ಒಂದೇ ದಿನ ನಿಗೂಢವಾಗಿ ಮೃತಪಟ್ಟಿದ್ದು, ಸಾವಿನ ಬಗ್ಗೆ ಹಲವಾರು ಅನುಮಾನಗಳು ಹುಟ್ಟಿಕೊಂಡಿದ್ದವು.
’ದಿಗ್ವಿಜಯ ನ್ಯೂಸ್’ಗೆ ಇವರು ಸಾಯುವ ಮುನ್ನ ಮಾಡಿರುವ ವಿಡಿಯೋ ಸಿಕ್ಕಿದ್ದು, ಭಕ್ತರ ಅನುಮಾನಕ್ಕೆ ತೆರೆ ಬಿದ್ದಿದೆ. ಪೊಲೀಸರ ತನಿಖೆ ವೇಳೆ ಮೃತರ ಮೊಬೈಲ್‌ನಲ್ಲಿ ಸೆಲ್ಪಿ ವಿಡಿಯೋ ಮಾಡಲಾಗಿದೆ. ಈ ವಿಡಿಯೋದಲ್ಲಿ ಅವರು ಜೀವನದಲ್ಲಿ ಜುಗುಪ್ಸೆಯಾಗಿ ಸಾಯುತ್ತಿರುವುದಾಗಿ ಹೇಳಿದ್ದಾರೆ. ಭಕ್ತರಿಗೆ, ಟ್ರಸ್ಟ್ ಸಿಬ್ಬಂದಿಗೆ ಕ್ಷಮೆ ಕೋರಿರುವ ಇಬ್ಬರೂ, ನೋವಿನಿಂದ ಅಳುತ್ತಾ ಇಹಲೋಕ ತ್ಯಜಿಸುವ ಮಾತುಗಳನ್ನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ.
ಏನಿದು ಘಟನೆ?
12ನೇ ವಯಸ್ಸಿಗೆ ದೇವರ ಆರಾಧಕರಾಗಿದ್ದ ಶ್ರೀಧರ್ ಅಲಿಯಾಸ್ ಅಮ್ಮ, ದೇವರ ಕಾರ್ಯಗಳಿಂದ ಅಸಂಖ್ಯಾತ ಭಕ್ತವೃಂದ ಹಾಗೂ ಶಿಷ್ಯ ವೃಂದವನ್ನ ಗಳಸಿದ್ದರು. ಹೆಣ್ಣಾಗಿ ಪರಿವರ್ತನೆಯಾಗಿದ್ದ ಶ್ರೀಧರ್ ಮುಂದೆ ಶ್ರೀಧರಮ್ಮ ಎಂದೇ ಪರಿಚಿತವಾದರು.ಈ ಭಾಗದಲ್ಲಿ ಭಕ್ತರ ಇಷ್ಟಾರ್ಥಗಳನ್ನ ಈಡೇರಿಸೋ ದೇವಿ, ಅಸಂಖ್ಯಾತ ಭಕ್ತರ ಪಾಲಿಗೆ ನೆಚ್ಚಿನ ಅಮ್ಮಾ ಕೂಡ ಆಗಿದ್ದರು. ನಿತ್ಯ ಭಕ್ತ ಸಮೂಹವನ್ನ ಸೆಳೆಯುತ್ತಿದ್ದ ಶ್ರೀಧರಮ್ಮ, ಗುಟ್ಟಹಳ್ಳಿ ಬಳಿ ಶ್ರೀ ಆದಿಶಕ್ತಿ ಕೋಳಾಲಮ್ಮದೇವಿ, ಶ್ರೀ ಮುನೇಶ್ವರಸ್ವಾಮಿ ದೇವಾಲಯ ಹೆಸರಲ್ಲಿ ಟ್ರಸ್ಟ್ ಮಾಡಿಕೊಂಡು ಭಕ್ತರ ಸೇವಾಕಾರ್ಯ ಮಾಡುತ್ತಿದ್ದರು. ಇವರ ಜತೆ ಶಿಷ್ಯ ಲಕ್ಷ್ಮೀಪತಿ ಕೂಡ ಇದ್ದರು.
ಇವರಿಬ್ಬರೂ ಒಂದೇ ದಿನ ನಿಗೂಢವಾಗಿ ಮೃತಪಟ್ಟಿದ್ದರು. ಶ್ರೀಧರಮ್ಮ ಕಾವಿ ಸಮವಸ್ತ್ರ ಧರಿಸಿಕೊಂಡೇ ಮೃತಪಟ್ಟಿದ್ದರು. ಇವರಿಬ್ಬರ ಸಾವಿನ ಸುತ್ತ ಅನುಮಾನದ ಹುತ್ತ ಬೆಳೆದಿದ್ದು, ಹಣ, ಆಸ್ತಿ, ಆಭರಣದ ವಿಚಾರಕ್ಕೆ ಜಗಳವಾಗಿ ಆತ್ಮಹತ್ಯೆ ಮಾಡಿಕೊಂಡರೇ ಅಥವಾ ಬೇರೆ ಯಾರಾದರೂ ಕೊಲೆ ಮಾಡಿದ್ದಾರೆಯೇ ಎಂದು ಸಂಶಯ ಶುರುವಾಗಿತ್ತು. ಪೂಜಾ ಕೈಂಕರ್ಯಗಳ ಮೂಲಕ ಜನರ ಕಷ್ಟ-ಸುಖಗಳಿಗೆ ಆಸರೆಯಾಗುತ್ತಿದ್ದ ಶ್ರೀಧರಮ್ಮನ ಸಂಪತ್ತು ಹಾಗೂ ಕೆಲವೊಂದು ಕಾರ್ಯಗಳೇ ಸಾವಿಗೆ ಕಾರಣ ಎಂದು ಸ್ಥಳೀಯರು ಅನಿಸಿಕೆ ವ್ಯಕ್ತಪಡಿಸಿದ್ದರು. ಇದೀಗ ವಿಡಿಯೋದಿಂದ ಇದು ಆತ್ಮಹತ್ಯೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್, ಚಿಕ್ಕಬಳ್ಳಾಪುರ)