15 ಮಂದಿ ಜತೆ ಬಂದ ಹ್ಯಾರೀಸ್‌ ಪುತ್ರ ನಳಪಾಡ್‌ ಹೀಗೆಲ್ಲಾ ಮಾಡಿದ್ರು... ಯುವ ಕಾಂಗ್ರೆಸ್‌ ಉಪಾಧ್ಯಕ್ಷೆ ದೂರು

nalpad
Published on

ಬೆಂಗಳೂರು: ಶಾಂತಿನಗರ ಶಾಸಕ ಹ್ಯಾರಿಸ್ ಪುತ್ರ ಮಹಮ್ಮದ್ ನಳಪಾಡ್ ಉಪಟಳ ಮುಂದುವರೆದಿದೆ. ಇದೀಗ ಅವರು ತಮ್ಮ ಪಕ್ಷದ ಕಾರ್ಯಕರ್ತರ ವಿರುದ್ಧವೇ ಬೆದರಿಕೆ ಹಾಕಿದ ಆರೋಪ ಎದುರಿಸುತ್ತಿದ್ದಾರೆ.

ಕರೊನಾ ನಿರ್ವಹಣೆಗೆ ಪಕ್ಷದ ಕಚೇರಿಯಲ್ಲಿ ತಯಾರಿ ಚಟುವಟಿಕೆ ನಡೆಯುತ್ತಿದ್ದ ವೇಳೆ ಏಕಾಏಕಿ 15 ಸಹಚರರೊಂದಿಗೆ ಆಗಮಿಸಿದ ನಳಪಾಡ್, ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಬೆದರಿಕೆ ಹಾಕಿದ್ದಾರೆ. ಕೈ ಎತ್ತಿ ಹೊಡೆಯಲೂ‌ ಮುಂದಾಗಿದ್ದಾರೆ.

ಯುವ ಕಾಂಗ್ರೆಸ್ ಉಪಾಧ್ಯಕ್ಷೆ ಭವ್ಯ ಅವರು ಪೊಲೀಸರಿಗೆ ದೂರು ನೀಡಿದ್ದು, ನಲಪಾಡ್ ಹಾಗೂ ಇತರರು ಬೆದರಿಕೆ ಹಾಕಿದ್ದಾಗಿ ತಿಳಿಸಿದ್ದಾರೆ. ಜತೆಗೆ ಭದ್ರತೆ ನೀಡುವಂತೆ ಕೋರಿದ್ದಾರೆ. ಹಾಗೆಯೇ ಉಪಚುನಾವಣೆ ಸಂದರ್ಭದಲ್ಲೂ ನಳಪಾಡ್ ಕಿರಿಕಿರಿ ಉಂಟು ಮಾಡಿದ್ದ ಎಂದು ಆಕೆ ದೂರಿನಲ್ಲಿ ಹೇಳಿಕೊಂಡಿದ್ದಾರೆ.

ನಳಪಾಡ್ ಗುಂಪು ಕಾರ್ಯಕರ್ತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಬಳಿಕ ಮತ್ತೆ ಐದು ಜನರು ಬಂದು ನಮ್ಮ ಬಾಸ್ ನಳಪಾಡ್ ವಿಷಯಕ್ಕೆ ಬಂದರೆ ಸುಮ್ಮನಿರಲ್ಲ ಎಂದು ಬೆದರಿಕೆ ಹಾಕಿದ್ದಾರೆ.

ಈ ಹಿಂದೆ ತನ್ನ ಸ್ನೇಹಿತನಿಗೆ ಮುಖಮೂತಿ ನೋಡದೆ ಚಚ್ಚಿ ಸುದ್ದಿಯಾಗಿದ್ದ ನಳಪಾಡ್ ಹಲವು ತಿಂಗಳು‌ ಜೈಲುಪಾಲಾಗಿದ್ದರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಳಪಾಡ್‌ಗೆ ಚುನಾವಣೆಯಲ್ಲಿ‌ಹೆಚ್ಚಿನ ಮತ ಬಂದಿತ್ತು. ಆದರೆ ಆತನ ಹಿನ್ನೆಲೆಯನ್ನು ಗಮನಿಸಿ ಪಕ್ಷ ಅಧ್ಯಕ್ಷ ಸ್ಥಾನ ನಿರಾಕರಿಸಿತ್ತು. ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇತರರಿಗೆ ವಿವಿಧ ಜವಾಬ್ದಾರಿ ನೀಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net