

ಮೈಸೂರು: ಅಣ್ಣ ಬೈದು ಬುದ್ಧಿಮಾತು ಹೇಳಿದ ಎನ್ನುವ ಕಾರಣಕ್ಕೆ ನೊಂದು ತಮ್ಮ ಆತ್ಮಹತ್ಯೆ ಮಾಡಿಕೊಂಡರೆ, ತನ್ನಿಂದಾಗಿ ತಮ್ಮ ಮೃತಪಟ್ಟ ಸುದ್ದಿ ಕೇಳಿ, ತಮ್ಮನೂ ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ಎಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ನಡೆದಿದೆ.
ಅಣ್ಣ- ತಮ್ಮಂದಿರ ಚಿತೆಗಳು ಅಕ್ಕಪಕ್ಕದಲ್ಲಿಯೇ ಉರಿಯುತ್ತಿರುವುದನ್ನು ಕಂಡ ಕುಟುಂಬಸ್ಥರು ಮಾತ್ರವಲ್ಲದೇ ಗ್ರಾಮಸ್ಥರೂ ಕಣ್ಣೀರಿಟ್ಟಿದ್ದಾರೆ.
ವೆಂಕಟೇಶ್(28) ಮತ್ತು ಹರೀಶ್(26) ಮೃತ ಸೋದರರು.
ರೈತನಾಗಿದ್ದ ಹರೀಶ್ ಟ್ರ್ಯಾಕ್ಟರ್ ಚಾಲಕನಾಗಿದ್ದ. ಆತ ತುಂಬಾ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಚಾಲನೆ ಮಾಡುತ್ತಿದ್ದ. ಹೀಗೆ ಮಾಡಿದರೆ ಅನಾಹುತ ಸಂಭವಿಸಬಹುದು ಎನ್ನುವ ಕಾರಣಕ್ಕೆ ಅಣ್ಣ ವೆಂಕಟೇಶ್ ತಮ್ಮನಿಗೆ ಬುದ್ಧಿಮಾತು ಹೇಳಿದ್ದ. ಈ ಮೊದಲು ತಂದೆ ಕೂಡ ಆತನಿಗೆ ಬುದ್ಧಿ ಹೇಳಿದ್ದರು. ಆದರೆ ಅಣ್ಣ ಬೈದು ಬುದ್ಧಿಮಾತು ಹೇಳಿದ್ದನ್ನು ತಮ್ಮ ಹರೀಶ್ ಸಹಿಸದಾದ.
ಇದರಿಂದ ನೊಂದುಕೊಂಡು ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೇಣು ಬಿಗಿದುಕೊಂಡಿರುವ ದೃಶ್ಯಗಳನ್ನು ಅಣ್ಣನ ಮೊಬೈಲ್ ಫೋನ್ಗೆ ಕಳುಹಿಸಿದ್ದರು ಸ್ನೇಹಿತರು.
ಅವನ ಆತ್ಮಹತ್ಯೆಯ ಸುದ್ದಿ ತಿಳಿಯುತ್ತಲೇ ಅಣ್ಣ ವೆಂಕಟೇಶ್ ತನ್ನಿಂದಾಗಿ ತಮ್ಮ ಮೃತಪಟ್ಟಿರುವುದನ್ನು ಅರಗಿಸಿಕೊಳ್ಳಲಾಗದೇ ಮಾನಸಿಕವಾಗಿ ಕುಸಿದಿದ್ದ. ಇದರಿಂದ ತುಂಬಾ ನೊಂದುಕೊಂಡ ಆತ ರಸ್ತೆ ಬದಿಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಎಚ್.ಡಿ.ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.