

ಬೆಂಗಳೂರು: ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಪಕ್ಷದ ನಾಯಕತ್ವದಲ್ಲೇ ಎದುರಿಸಿತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿಎಂ ಅಧಿಕೃತ ನಿವಾಸ ರೇಸ್ ವ್ಯೂ ಕಾಟೇಜ್ ಬಳಿ ಮಂಗಳವಾರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು ಜನರ ಒಲವು, ಬೆಂಬಲ ಪಕ್ಷದ ಪರವಾಗಿದೆ. ಸಂಘಟನೆ ಹಾಗೂ ಕಾರ್ಯಕರ್ತರ ಪಡೆ ಸಶಕ್ತವಾಗಿದ್ದು, ಪಕ್ಷದ ನೇತೃತ್ವದಲ್ಲಿ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ ಎಂದರು.
ದಾವಣಗೆರೆಯಲ್ಲಿ ನಡೆದ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ಎರಡೂ ಕ್ಷೇತ್ರಗಳ ಉಪ ಚುನಾವಣೆ ತಯಾರಿ ಚರ್ಚೆಯಾಗಿದ್ದು, ವೀಕ್ಷಕರನ್ನು ನೇಮಿಸಲು ತೀರ್ಮಾನಿಸಿದ್ದು, ಪಕ್ಷದ ರಾಜ್ಯಾಧ್ಯಕ್ಷರು ಕಾರ್ಯೋನ್ಮುಖರಾಗಿದ್ದಾರೆ. ವೀಕ್ಷಕರು ಇಷ್ಟರಲ್ಲೇ ಭೇಟಿ ನೀಡಿ ಚರ್ಚಿಸಲಿದ್ದು, ಆದಷ್ಟು ಬೇಗ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಲಾಗುವುದು ಎಂದು ಬೊಮ್ಮಾಯಿ ತಿಳಿಸಿದರು.