ಬುರ್ಖಾ ತೆಗೆಯುತ್ತಿದ್ದಂತೆಯೇ ಮೂರ್ಛೆ ಹೋಗೋ ಬೆಂಗಳೂರಿನ ಚಿನ್ನದಂಗಡಿವರು! ಬ್ಲ್ಯಾಕ್​ ಮ್ಯಾಜಿಕ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ...

burkha
Published on

ಬೆಂಗಳೂರು: ಗ್ರಾಹಕರ ಸೋಗಿನಲ್ಲಿ ಬಂದ ಬುರ್ಖಾಧಾರಿ ಮಹಿಳೆಯೊಬ್ಬಳು ಜ್ಯೂವೆಲರಿ ಶಾಪ್ ಮಾಲೀಕರೊಬ್ಬರ ಮೇಲೆ‌ ಬ್ಲಾಕ್ ಮ್ಯಾಜಿಕ್ ಪ್ರಯೋಗ ಮಾಡಿ 85 ಸಾವಿರ ರೂಪಾಯಿ ಹಣ ದೋಚಿ ಹೋಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಯಲಹಂಕದ ಅಟ್ಟೂರು ಲೇಔಟ್ ಜ್ಯುವೆಲರಿ ಶಾಪ್​ನಲ್ಲಿ ಈ ಘಟನೆ ನಡೆದಿದೆ. ಕ್ಷಣಮಾತ್ರದಲ್ಲೇ 85 ಸಾವಿರ ಹಣ ಎಗರಿಸಿ ಖತರ್ನಾಕ್ ಮಹಿಳೆ ಎಸ್ಕೇಪ್ ಆಗಿದ್ದಾಳೆ.

ನಕಲಿ ಬಂಗಾರದ‌ ಆಭರಣ ತಂದು ಕೈಚಳಕ ತೋರಿದ್ದಾಳೆ. ಈಕೆ ಬುರ್ಖಾ ತೆಗೆದು ಮುಖ‌ ತೋರಿಸುತ್ತಿದ್ದಂತೆಯೇ ಅಂಗಡಿ ಮಾಲೀಕ ಪ್ರಜ್ಞೆ ತಪ್ಪಿದ್ದಾರೆ. ನಂತರ ಆಕೆ ಹೇಳಿದಂತೆ ಸಾವಿರಾರು ರೂಪಾಯಿ ಹಣ ಕೊಟ್ಟಿದ್ದಾರೆ!

ಮಹಿಳೆ ಬ್ಲ್ಯಾಕ್ ಮ್ಯಾಜಿಕ್​ನ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಹಿಳೆ ಅಂಗಡಿಯಿಂದ‌ ಹೊರ‌ ಹೋಗ್ತಿದ್ದಂತೆ ಎಚ್ಚರಗೊಂಡ ಅಂಗಡಿ ಮಾಲೀಕನಿಗೆ ಆಗಲೇ ತಾವು ಮೋಸ ಹೋಗಿರುವುದು ತಿಳಿದಿದೆ.

ಇದೇ ರೀತಿ‌ ಯಲಹಂಕ ಆರ್.ಟಿ ನಗರ ಸೇರಿದಂತೆ ಹಲವೆಡೆ ಮಹಿಳೆ ವಂಚನೆ ಮಾಡಿರುವುದು ತಿಳಿದುಬಂದಿದೆ. ಮುಖ‌ ತೋರಿಸಿ ಕೈ ಮುಟ್ಟುತ್ತಿದ್ದಂತೆಯೇ ಅಂಗಡಿಯವರು ಪ್ರಜ್ಞೆ ಕಳೆದುಕೊಳ್ಳುತ್ತಿದ್ದಾರೆ. ನಂತರ ಆಕೆ ಹೇಳಿದಂತೆ ಹಣ, ಒಡವೆ ಕೊಡುತ್ತಿರುವುದು ತಿಳಿದುಬಂದಿದೆ. ಇದರಿಂದಾಗಿ ಚಿನ್ನದಂಗಡಿಯ ಮಾಲೀಕರಿಗೆ ಆತಂಕ ಎದುರಾಗಿದೆ.

ಬೆಂಗಳೂರಿನ ನಾಗಶೆಟ್ಟಿಹಳ್ಳಿಯಲ್ಲಿಯೂ‌ ಇದೇ ರೀತಿ ಘಟನೆ ನಡೆದಿದೆ. ಮಂಗಳಾ ಜ್ಯೂವೆಲರ್ಸ್​ನಲ್ಲಿ ಬ್ಲ್ಯಾಕ್​ ಮ್ಯಾಜಿಕ್​ ಮಾಡಿ ನಕಲಿ ಒಡವೆ ನೀಡಿ ಒಂದು‌ ಲಕ್ಷ ರೂಪಾಯಿ ಮೋಸ ಮಾಡಲಾಗಿದೆ.

ಈ ಬಗ್ಗೆ ದೂರು ನೀಡಿದರೂ ಯಲಹಂಕ ಉಪನಗರ ಪೊಲೀಸರ ನಿರ್ಲಕ್ಷ್ಯ ತೋರುತ್ತಿರುವುದಾಗಿ ಆರೋಪಿಸಲಾಗಿದೆ. ಎಫ್​ಐಆರ್ ದಾಖಲಿಸಿ‌ ತನಿಖೆ ನಡೆಸದೆ ಪೊಲೀಸರು ಕೈತೊಳೆದುಕೊಳ್ಳುತ್ತಿರುವುದಾಗಿ ಅಂಗಡಿ ಮಾಲೀಕರು ದೂರಿದ್ದಾರೆ. ಪೊಲೀಸರ ಕ್ರಮದ ವಿರುದ್ಧ ಅಂಗಡಿ ಮಾಲೀಕರ ಆಕ್ರೋಶ ವ್ಯಕ್ತವಾಗಿದೆ. (ದಿಗ್ವಿಜಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net