ಮುದ್ದು ಕೋತಿಮರಿಗೊಂದು ಭರ್ಜರಿ ಹುಟ್ಟುಹಬ್ಬ: ಸಚಿವ ಈಶ್ವರಪ್ಪ, ಶಿಲಾ ಮಠದ ಕಿರಿಯ ಶ್ರೀಗಳೂ ಭಾಗಿ

monkey
Published on

ಶಿವಮೊಗ್ಗ: ನಾಯಿ, ಬೆಕ್ಕುಗಳನ್ನು ಎಷ್ಟೋ ಮಂದಿ ಮಕ್ಕಳಂತೆಯೇ ಸಾಕುತ್ತಾರೆ. ಆದರೆ ಶಿವಮೊಗ್ಗದ ಮಹಿಳೆಯೊಬ್ಬರು ಮಂಗನ ಮರಿಯೊಂದನ್ನು ಮಗುವಿನಂತೆಯೇ ಸಾಕಿದ್ದು, ಇದರ ಹುಟ್ಟುಹಬ್ಬ ನೆರವೇರಿಸಲಾಗಿದೆ.

ವಿಶೇಷ ಎಂದರೆ, ಈ ಹುಟ್ಟುಹಬ್ಬಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಮತ್ತು ಚಿಕ್ಕಮಗಳೂರಿನ ಜಿಲ್ಲೆಯ ತಾವರೆಕೆರೆಯ ಶಿಲಾ ಮಠದ ಶ್ರೀ ಅಭಿನವ ಸಿದ್ದಲಿಂಗ ಶಿವಾಚಾರ್ಯ ಕಿರಿಯ ಶ್ರೀಗಳು ಕೂಡ ಸಾಕ್ಷಿಯಾದರು.

ಇಂಥದ್ದೊಂದು ಅಪರೂಪದ ಹುಟ್ಟುಹಬ್ಬ ಆಚರಿಸಿಕೊಂಡಿರುವ ಕೋತಿಮರಿಯನ್ನು ಸಾಕಿರುವುದು ಶಿವಮೊಗ್ಗ ನಗರದ ಎನ್ ರಸ್ತೆಯಲ್ಲಿರುವ ಪಾರ್ವತಮ್ಮ ಎನ್ನುವವರು. ಇವರಿಗೆ ಸುಮಾರು ಆರು ವರ್ಷಗಳ ಹಿಂದೆ ಯಾರೋ ಕೋತಿಮರಿಯನ್ನು ಕೊಟ್ಟು ಹೋಗಿದ್ದರು. ತಮಗೆ ಸಾಕಲು ಆಗುವುದಿಲ್ಲ ಎನ್ನುವ ಕಾರಣಕ್ಕೆ ಇದನ್ನು ಪಾರ್ವತಮ್ಮನವರ ಬಳಿ ಬಿಟ್ಟಿದ್ದರು. ಅದಕ್ಕೆ ಪಾರ್ವತ‌ಮ್ಮನವರು ಮಾರುತಿ ಎಂದು ಹೆಸರು ಇಟ್ಟಿದ್ದಾರೆ.

ಪಾರ್ವತಮ್ಮನವರಿಗೆ ಇಬ್ಬರು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳು ಇದ್ದಾರೆ. ಐದನೆಯ ಮಗುವಾಗಿ ಈ ಕೋತಿಮರಿ ಸೇರ್ಪಡೆಗೊಂಡಿದೆ. ಇತರ ಮಕ್ಕಳಂತೆಯೇ ಕೋತಿಮರಿಯನ್ನೂ ಅವರು ತಮ್ಮ ಮಗುವಿನಂತೆ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ವರ್ಷ ಡಿಸೆಂಬರ್ 5 ರಂದು ಮಾರುತಿ ಜನ್ಮದಿನದ ಆಚರಿಸಲಾಗುತ್ತದೆ. ಅದೇ ರೀತಿ ಈ ವರ್ಷವೂ ಆಚರಿಸಲಾಗಿದೆ.

ದಿನವೂ ಅದಕ್ಕೆ ಸ್ನಾನ ಮಾಡಿಸುತ್ತೇವೆ, ಬಟ್ಟೆ ತೊಡಿಸುತ್ತೇವೆ, ನಾವು ತಿನ್ನುವ ಎಲ್ಲಾ ಆಹಾರ ಅವನೂ ತಿನ್ನುತ್ತಾನೆ, ಹೊರಗಡೆಯೂ ಬರುತ್ತಾನೆ, ಐಸ್‌ಕ್ರೀಂ ಎಂದರೆ ತುಂಬಾ ಇಷ್ಟ. ಹೊರಗೆ ಬಂದಾಗ ಜ್ಯೂಸ್ ಮಾತ್ರ ಕುಡಿಯುತ್ತಾನೆ ಎನ್ನುತ್ತಾರೆ ಕುಟುಂಬದ ಸದಸ್ಯರು. ಇವರ ಮನೆಯಲ್ಲಿ ಬೆಕ್ಕು ಕೂಡ ಇದ್ದು, ಮಾರುತಿ ಮತ್ತು ಬೆಕ್ಕು ಕ್ಲೋಸ್‌ ಫ್ರೆಂಡ್ಸ್ ಎನ್ನುತ್ತಾರೆ ಪಾರ್ವತಮ್ಮ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net