

ಬೆಂಗಳೂರು: ಸುಲಭದಲ್ಲಿ ಹಣ ಮಾಡಬಹುದು ಎಂದು ಜನರನ್ನು ನಂಬಿಸಿ ಕೋಟಿ ಕೋಟಿಗಟ್ಟಲೆ ಪಂಗನಾಮ ಹಾಕುತ್ತಿರುವ ಹಲವಾರು ಘಟನೆಗಳು ನಡೆಯುತ್ತಲೇ ಇರುತ್ತವೆ. ಆನ್‌ಲೈನ್ ಮೂಲಕ ಮಾತ್ರವಲ್ಲದೇ, ನೇರಾನೇರವಾಗಿಯೂ ಇಂಥ ಮೋಸ ಮಾಡುವವರಿಗೇನೂ ಕಮ್ಮಿ ಇಲ್ಲ. ಶೀಘ್ರದಲ್ಲಿ, ಹೆಚ್ಚು ದುಡಿಮೆಯೇ ಇಲ್ಲದೇ ಹಣ ಗಳಿಸುವ ಉಪಾಯ ಕಂಡುಕೊಳ್ಳಬಯಸುವವರು ಕೊನೆಗೆ ಟೋಪಿ ಹಾಕಿಸಿಕೊಳ್ಳುತ್ತಿರುವ ಘಟನೆಗಳ ನಡುವೆಯೇ, ಬೆಂಗಳೂರಿನಲ್ಲೊಂದು ಮಹಾ ಮೋಸದ ಘಟನೆ ನಡೆದಿದೆ!
ಇದು ಅಂತಿಂಥ ಘಟನೆಯಲ್ಲ, ಕೇಳಿದರೆ ಅಬ್ಬಬ್ಬಾ ಎನ್ನುವಂಥ ಷಡ್ಯಂತ್ರವಿದು. ಷೋರೂಮ್‌ಗಳಿಗೆ ಹೆಚ್ಚೆಚ್ಚು ಗ್ರಾಹಕರನ್ನು ಕರೆತಂದರೆ ಹೆಚ್ಚೆಚ್ಚು ಹಣ ಪಡೆಯಬಹುದು ಎಂಬ ಆಮಿಷ ಒಡ್ಡಿ ಅನೇಕ ಮಂದಿಯನ್ನು ಮೋಸದ ಜಾಲಕ್ಕೆ ಬೀಳಿಸಿರುವ ಘಟನೆಯಿದು.
ನಗರದ ಎಂ.ಎಸ್.ಪಾಳ್ಯ ನಿವಾಸಿ ನಯೀಮ್ ತಾಜ್ ಎನ್ನುವವರು ನೀಡಿರುವ ದೂರಿನ ಆಧಾರದ ಮೇಲೆ ಈ ಮಹಾ ವಂಚನೆ ಬೆಳಕಿಗೆ ಬಂದಿದೆ.
ಏನಿದು ಘಟನೆ?
ಕಳೆದ ವರ್ಷ ಲಾಕ್‌ಡೌನ್ ಇದ್ದಾಗ ರೇಷನ್ ನೀಡುತ್ತಿದ್ದ ನಯೀಮ್ ಅವರಿಗೆ ಗುಲ್ಜಾರಾ ಬಾನು ಎಂಬಾಕೆಯ ಪರಿಚಯವಾಗಿದೆ. ಸುಲಭದಲ್ಲಿ ಹಣ ಮಾಡಬಹುದು, ನೀವೇನೂ ಹೆಚ್ಚಿಗೆ ಶ್ರಮ ಪಡಬೇಕಾಗಿಲ್ಲ. ಒಂದು ಸ್ಕೀಂ ಇದೆ. ಅದರಲ್ಲಿ ನೀವು ಸೇರಿಕೊಂಡರೆ ಆಯ್ತು. ಕೆಲವೊಂದು ಷೋರೂಮ್‌ಗಳ ಪರಿಚಯ ಮಾಡಿಸುತ್ತೇನೆ. ಅಲ್ಲಿ ಹೆಚ್ಚೆಚ್ಚು ಗ್ರಾಹಕರನ್ನು ನೀವು ಮಾಡಿಕೊಟ್ಟರೆ ಹೆಚ್ಚೆಚ್ಚು ಸುಲಭದಲ್ಲಿ ಹಣ ಗಳಿಸಬಹುದು ಎಂದಿದ್ದಾಳೆ.
ಇದನ್ನು ನಂಬಿದ ಗುಲ್ಜಾರ್, ಆಕೆ ತಿಳಿಸಿದಂತೆ ಸ್ಕೀಂ ಸೇರಿದ್ದಾರೆ. ಮೊದಲಿಗೆ ಗುಲ್ಜಾರಾ ನಯೀಮ್ ಅವರನ್ನು ಪುಲಕೇಶಿ ನಗರದ ಪ್ರಸಿದ್ಧ ಮೊಬೈಲ್ ಷೋರೂಮ್‌ಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿರುವ ಮೊಹಮ್ಮದ್ ಇಮ್ರಾನ್ ಎಂಬಾತನ ಪರಿಚಯ ಮಾಡಿಸಿದ್ದಾಳೆ. ಆತ ಕೂಡ ಈ ಸ್ಕೀಂ ಬಗ್ಗೆ ವಿವರಿಸಿದ್ದಾನೆ. ನಂತರ ನಯೀಮ್ ಅವರ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಪಡೆದಿದ್ದಾನೆ. ಒಂದು ಹಾಳೆಗೆ ಸಹಿ ಹಾಕಿಸಿಕೊಂಡಿದ್ದಾನೆ.
ಸ್ಕೀಂಗೆ ಜಾಯಿನ್ ಆಗಲು ನಿಮ್ಮ ಮೊಬೈಲ್‌ಗೆ ಒಂದು ಓಟಿಪಿ ಬರುತ್ತದೆ ಹೇಳಿ ಅಂದಿದ್ದಾನೆ ಮೊಹಮ್ಮದ್, ಅದರಂತೆ ಬಂದ ಓಟಿಪಿಯನ್ನು ಇಮ್ರಾನ್ ಹಂಚಿಕೊಳ್ಳುತ್ತಿದ್ದಂತೆಯೇ ಅವನಿಗೆ ಒಂದು ಸಾವಿರ ರೂಪಾಯಿ ಟ್ರಾನ್ಸ್‌ಫರ್ ಮಾಡಲಾಗಿದೆ. ಏನೂ ಶ್ರಮವಿಲ್ಲದೇ ಒಂದು ಸಾವಿರ ರೂಪಾಯಿ ಬಂದದ್ದನ್ನು ಕಂಡು ನಯೀಮ್ ಸಂತೋಷಗೊಂಡಿದ್ದು, ತಾವು ಹೆಚ್ಚು ಗ್ರಾಹಕರನ್ನು ಮಾಡಿಕೊಡುವುದಾಗಿ ಹೇಳಿದ್ದಾರೆ.
ಅಲ್ಲಿಂದ ಗುಲ್ಜಾರಾ ನಯೀಮ್ ಅವರನ್ನು ಆರ್‌ಟಿನಗರದ ಎರಡು ಬೈಕ್ ಷೋ ರೂಮ್‌ಗೆ ಕರೆದುಕೊಂಡು ಹೋಗಿದ್ದಾಳೆ, ಬೈಕ್ ಷೋರೂಮಿನ ಮಾಲೀಕರಾದ ಹಫೀಜ್ ಹಾಗೂ ಮನ್ಸೂರ್‌ನನ್ನು ಪರಿಚಯಿಸಿದ ಗುಲ್ಜಾರಾ, ಅಲ್ಲಿಯೂ ಇದೇ ರೀತಿ ಮಾಡಿಸಿದ್ದಾಳೆ. ಅಂದರೆ ಸ್ಕೀಂ ಸೇರಲು ಆಧಾರ್, ಪ್ಯಾನ್ ಕಾರ್ಡ್ ಪಡೆದು, ಬಂದಿರುವ ಓಟಿಪಿಯನ್ನು ಪಡೆದು ನಯೀಮ್ ಅವರಿಗೆ ದುಡ್ಡು ನೀಡಲಾಗಿದೆ.
ಇಷ್ಟೆಲ್ಲಾ ದುಡ್ಡು ಸುಲಭದಲ್ಲಿ ಬರುತ್ತಿದ್ದಂತೆಯೇ ನಯೀಮ್ ಹೆಚ್ಚೆಚ್ಚು ಗ್ರಾಹಕರನ್ನು ಮಾಡಲು ಮುಗಿಬಿದ್ದು, ಕೊನೆಗೆ 24 ಮಂದಿಯನ್ನು ಈ ಷೋರೂಮ್‌ಗಳಿಗೆ ಗ್ರಾಹಕರನ್ನಾಗಿ ಮಾಡಿ ಹಣ ಪಡೆದಿದ್ದಾರೆ. ಈ ಎಲ್ಲರಿಗೂ ಇದೇ ಪ್ರಕ್ರಿಯೆ ಮಾಡಲಾಗಿದೆ.
ಕೊನೆಗೆ, ತಿಂಗಳಾಗುವಷ್ಟರಲ್ಲಿ ಎಲ್ಲರಿಗೂ ಷೋರೂಮ್‌ಗಳಿಂದ ಕರೆ ಬಂದಿದ್ದು, ಇಎಂಐ ಕಟ್ಟುವಂತೆ ಹೇಳಲಾಗಿದೆ. ತಾವು ಏನೂ ಸಾಲ ಪಡೆದುಕೊಳ್ಳದೇ ಇದ್ದರೂ ದುಡ್ಡು ಕಟ್ಟಲು ಏಕೆ ಹೇಳಲಾಗುತ್ತಿದೆ ಎಂದು ಗಲಾಟೆ ಶುರುವಾದಾಗ ತಿಳಿದುಬಂದದ್ದು ಏನೆಂದರೆ, ಇವರ ಹೆಸರಿನಲ್ಲಿ ಕಾರು, ಬೈಕ್, ದುಬಾರಿ ಬೆಲೆಯ ಮೊಬೈಲ್‌ಗಳನ್ನು ಖರೀದಿ ಮಾಡಲಾಗಿದೆ. ನೀವಿನ್ನೂ ಹಣ ಕಟ್ಟಲಿಲ್ಲ, ಕೂಡಲೇ ಹಣ ಕಟ್ಟಿ ಎನ್ನಲಾಗಿದೆ. ಅಲ್ಲಿಗೆ ಹೋಗಿ ನೋಡಿದಾಗ ಲಕ್ಷ ಲಕ್ಷ ರೂಪಾಯಿ ಬೆಲೆ ಬಾಳುವ ಕಾರು, ಬೈಕ್, ಮೊಬೈಲ್ ಇವರ ಹೆಸರಿನಲ್ಲಿಯೇ ಖರೀದಿಯಾಗಿರುವುದು ತಿಳಿದಾಗಲೇ ಎಲ್ಲರಿಗೂ ತಾವು ಮೋಸ ಹೋಗಿದ್ದು ತಿಳಿದಿದೆ.
ಕೊನೆಗೆ ಗುಲ್ಜಾರಾಗೆ ಕರೆ ಮಾಡಿದಾಗ ಸಹಜ ಎಂಬಂತೆ ಆಕೆಯ ಮೊಬೈಲ್ ಸ್ವಿಚ್ ಆಫ್ ಆಗಿದೆ. ಇದಕ್ಕೂ ಮುನ್ನ ಆಕೆ ತಾನು ದುಬೈಗೆ ಹೋಗುತ್ತಿದ್ದು, ಸದ್ಯ ಸಿಗುವುದಿಲ್ಲ ಎಂದಿದ್ದಳು. ನಂತರ ಈಗ ಪೊಲೀಸ್ ಠಾಣೆಯಲ್ಲಿ ನಯೀಮ್ ದೂರು ದಾಖಲು ಮಾಡಿದ್ದಾರೆ! ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮದ್ ಜೈನ್, ಮುಜಾಹಿದ್, ಹಫೀಜ್, ಮನ್ಸೂರ್, ಲೋಕೇಶ, ಕಾರ್ತಿಕ್ ಸೇರಿದಂತೆ ಇನ್ನಿತರ ಆರೋಪಿಗಳ ಶೋಧಕಾರ್ಯದಲ್ಲಿ ಪೊಲೀಸರು ತೊಡಗಿದ್ದಾರೆ.