ಭಾರತ ಬಂದ್‌: ಜನರಲ್ಲಿ ನಿರಾಸಕ್ತಿ- ಮನವಿಗೆ ಜಗ್ಗದ ವ್ಯಾಪಾರಸ್ಥರು, ಗದರಿಸಿ ಬಂದ್‌ ಮಾಡಿಸ್ತೀರೋ ಪ್ರತಿಭಟನಾಕಾರರರು

bharath bundh
Published on

ಬೆಂಗಳೂರು: ಕೇಂದ್ರದ ಕೃಷಿ ಕಾನೂನು ವಿರೋಧಿಸಿ ನಡೆಸುತ್ತಿರುವ ಹೋರಾಟಕ್ಕೆ ಒಂದು ವರ್ಷ ಆಗಿರುವ ಹಿನ್ನೆಲೆಯಲ್ಲಿ ಇಂದು ದೇಶಾದ್ಯಂತ ಕೆಲವು ರೈತ ಸಂಘಟನೆಗಳು ಭಾರತ ಬಂದ್‌ಗೆ ಇಂದು ಕರೆ ನೀಡಿದ್ದು, ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಲ್ಲಲ್ಲಿ ಕೆಲವರು ಪ್ರತಿಭಟನೆ ಮಾಡುತ್ತಿರುವುದನ್ನು ಹೊರತುಪಡಿಸಿದರೆ ಈ ಪ್ರತಿಭಟನೆಗೆ ಜನರು ಉತ್ಸಾಹ ತೋರುತ್ತಿಲ್ಲ.

ಹಲವೆಡೆಗಳಲ್ಲಿ ಪ್ರತಿಭಟನಾಕಾರರೇ ಜನರು, ವ್ಯಾಪಾರಸ್ಥರಲ್ಲಿ ಹೋಗಿ ಧಮ್ಕಿ ಹಾಕುತ್ತಿರುವ ಘಟನೆಗಳು ನಡೆಯುತ್ತಿವೆ. ಆದರೆ ಕೆಲವರು ಮಾತ್ರ ಪ್ರತಿಭಟನಾಕಾರರ ಉಸಾಬರಿಯೇ ಬೇಡವೆಂದು ವ್ಯಾಪಾರ- ವಹಿವಾಟು ಬಂದ್‌ ಮಾಡಿದ್ದರೆ, ಹಲವು ಜಿಲ್ಲೆಗಳಲ್ಲಿ ಯಾರೂ ಪ್ರತಿಭಟನಾಕಾರರ ಮಾತನ್ನು ಕೇಳದೇ ಇರುವುದು ಕಂಡುಬಂದಿದೆ. ಅಂಗಡಿ ಮುಂಗಟ್ಟು ಮುಚ್ಚಿ ಬಂದ್‌ಗೆ ಸಹಕರಿಸುವಂತೆ ಆಟೋ ಮೂಲಕ ಮನವಿ ಮಾಡಿದರೂ ಯಾರೂ ಕಿವಿಗೊಡುತ್ತಿಲ್ಲ. ಎಂದಿನಂತೆ ತಮ್ಮ ಕರ್ತವ್ಯದಲ್ಲಿ ತೊಡಗಿರುವುದು ಕಂಡುಬಂದಿದೆ.

ಬೆಂಗಳೂರಿನಲ್ಲಂತೂ ಬಂದ್‌ ಯಾವುದೇ ಬಿಸಿ ತಟ್ಟಲಿಲ್ಲ. ಹೂವು, ಹಣ್ಣಿನ ಮಾರುಕಟ್ಟೆಗಳಿಗೆ ಜನ ಬರುತ್ತಿದ್ದು ಎಂದಿನಂತೆ ವ್ಯಾಪಾರ ನಡೆಯುತ್ತಿದೆ. ರಸ್ತೆ ಸಂಚಾರದಲ್ಲೂ ಯಾವುದೇ ವ್ಯತ್ಯಯವಾಗಿಲ್ಲ. ಬಸ್, ರಿಕ್ಷಾ, ಕಾರು, ಬೈಕುಗಳು ಪ್ರತಿದಿನದಂತೆ ರಸ್ತೆಯಲ್ಲಿ ಸಂಚರಿಸುತ್ತಿವೆ. ಬಿಎಂಟಿಸಿ, ಕೆಎಸ್ಆರ್‌ಟಿಸಿ ಬಸ್ಸುಗಳಲ್ಲಿ ಜನ ಪ್ರತಿದಿನದಂತೆ ಸಂಚರಿಸುತ್ತಿದ್ದಾರೆ. ಪ್ರತಿಭಟನೆಯಿಂದ ಬಸ್ ತಡೆಯಬಾರದು ಎಂಬ ಕಾರಣಕ್ಕೆ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಕೊಪ್ಪಳದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ತಲೆ ಮೇಲೆ ಇಟ್ಟಿಗೆ ಇಟ್ಟುಕೊಂಡು ವಿನೂತನವಾಗಿ ಪ್ರತಿಭಟನೆ ಮಾಡಿದರು. ಕೊಪ್ಪಳದ ಕೇಂದ್ರಿಯ ಬಸ್ ನಿಲ್ದಾಣದ ಮುಂದೆ ಪ್ರತಿಭಟನೆ ನಡೆಸಿ ಸುಗ್ರೀವಾಜ್ಞೆ ಹಿಂಪಡೆಯಲು ಒತ್ತಾಯ ಮಾಡಿದರು. ಹಾಸನ ಮಾರುಕಟ್ಟೆಯಲ್ಲಿ ಸಂಚರಿಸಿ ಪ್ರತಿಭಟನಾಕಾರರ ಆಕ್ರೋಶ...

ಹಾಸನದ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಪ್ರತಿಭಟನಾಕಾರರು ಜನರ ಬಳಿ ಹೋಗಿ ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಬೆದರಿಸಿ ಬಂದ್‌ ಮಾಡಿಸುತ್ತಿದ್ದಾರೆ. ಹೊಟ್ಟೆಗೆ ಏನ್‌ ತಿಂತೀರಿ? ರೈತರೇ ಇಲ್ಲದಿದ್ರೆ ಏನು ಮಾಡ್ತೀರಿ.. ಬಂದ್ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಲಬುರಗಿಯಲ್ಲಿ ಏಕಾಏಕಿ ಸಾರಿಗೆ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಾರಿಗೆ ಸಂಚಾರವನ್ನ ಒತ್ತಾಯಪೂರ್ವಕವಾಗಿ ಪ್ರತಿಭಟನಕಾರರು ಸ್ಥಗಿತಗೊಳಿಸಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net