

ಬೆಳಗಾವಿ: ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಯುವಕನ ಬರ್ಬರ ಹತ್ಯೆ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಯರಗಟ್ಟಿ ತಾಲೂಕಿನ ಮುಗಳಿಹಾಳ ಗ್ರಾಮದಲ್ಲಿ ನಡೆದಿದೆ.
ಮುಗಳಿಹಾಳ ಗ್ರಾಮದ ಅರ್ಜುನಗೌಡ ಪಾಟೀಲ್ (20) ಕೊಲೆಯಾದ ಯುವಕ. ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಎರಡು ಗುಂಪು ಮಧ್ಯೆ ಗಲಾಟೆ ಆರಂಭವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಚಾಕುವಿನಿಂದ ಇರಿದು ಅರ್ಜುನಗೌಡ ಪಾಟೀಲ್ ಹತ್ಯೆಯಾಗಿದೆ.
ಅರ್ಜುನಗೌಡ ಕುಸಿದು ಬೀಳ್ತಿದ್ದಂತೆ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಿನ್ನೆ ತಡರಾತ್ರಿ ಈ ಘಟನೆ ನಡೆದಿತ್ತು. ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ.
ಓರ್ವ ಅಪ್ರಾಪ್ತ ಸೇರಿದಂತೆ ಉದಯ ಭಂಡ್ರೊಲ್ಲಿ (21), ಸುಭಾಷ ಸೋಲಣ್ಣವರ (21) ವಿಠ್ಠಲ ಮೀಶಿ (20) ಎಂಬ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಈ ಬಗ್ಗೆ ಬೆಳಗಾವಿ ಎಸ್ಪಿ, ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಬಂಧಿತರೆಲ್ಲರೂ ಕಾಲೇಜು ವಿದ್ಯಾರ್ಥಿಗಳು, ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್)