

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ, ಜೆಡಿಎಸ್ ನ ಹಿರಿತಲೆಗಳಲ್ಲಿ ಒಂದಾದ ಬಸವರಾಜ ಹೊರಟ್ಟಿ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಪಕ್ಷದ ರಾಷ್ಟ್ರೀಯ ನಾಯಕ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಷಾ ಅವರನ್ನು ಹೊರಟ್ಟಿ ಮಂಗಳವಾರ ಭೇಟಿಯಾಗಿ ಹೂಗುಚ್ಛ ನೀಡಿ ಧನ್ಯವಾದ ಸಲ್ಲಿಸಿದರು.
ಬಿಜೆಪಿಗೆ ಹೊರಟ್ಟಿ ಸೇರ್ಪಡೆಗಾಗಿ ಒತ್ತಾಸೆ ನೀಡಿದ್ದ ಕೇಂದ್ರ ಸಚಿವ ಪ್ರಲ್ಹಾದಜೋಶಿ, ಮಾಜಿ ಸಿಎಂ ಜಗದೀಶ ಶೆಟ್ಟರ್, ಸಮ್ಮತಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಖುದ್ದು ಹಾಜರಿದ್ದು ಸಂತಸ ವ್ಯಕ್ತಪಡಿಸಿದರು.
ನಾನೇ ಅಭ್ಯರ್ಥಿ: ಷಾ ಅವರನ್ನು ಭೇಟಿಯಾಗಿ ಹೊರ ಬಂದ ನಂತರ ಹೊರಟ್ಟಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ಸಭಾಪತಿ ಸ್ಥಾನಕ್ಕೆ ಇಷ್ಟರಲ್ಲೇ ರಾಜೀನಾಮೆ ನೀಡುತ್ತೇನೆ. ವಿಧಾನ ಪರಿಷತ್ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ಪ್ರಕಟಿಸಿದರು.
ಪ್ರಬಲ ಪೈಪೋಟಿ: ಹೊರಟ್ಟಿ ಬಿಜೆಪಿ ಸೇರ್ಪಡೆಗೆ ಉತ್ತರ ಕರ್ನಾಟಕ ಭಾಗದ ಹಲವು ಬಿಜೆಪಿ ಮುಖಂಡರು ವಿರೋಧದ ಧ್ವನಿ ಎತ್ತಿದ್ದರು. ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ ಹೊರಟ್ಟಿಗೆ ಪ್ರಬಲ ಪೈಪೋಟಿ ನೀಡಬಲ್ಲ ಅಭ್ಯರ್ಥಿಗಳಿಗೆ ಕೊರತೆಯಿಲ್ಲ ಎಂದು ವಾದಿಸಿದ್ದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ, ಕರ್ನಾಟಕ ವಿವಿ ಸಿಂಡಿಕೇಟ್ ಸದಸ್ಯ ಸುಧೀಂದ್ರ ದೇಶಪಾಂಡೆ ಜತೆಗೆ ಸಂಗಮೇಶ ಬೂದಿಹಾಳ ಪ್ರಮುಖ ಟಿಕೆಟ್ ಆಕಾಂಕ್ಷೆಗಳಾಗಿದ್ದರು.
ಕುತೂಹಲಕ್ಕೆ ತೆರೆ: ಹೊರಟ್ಟಿ ಸೇರ್ಪಡೆಗೆ ಷಾ ಅವರೇ ಅಸ್ತು ಎನ್ನುವ ಮೂಲಕ ವಯೋಮಿತಿ, ವಿರೋಧದ ಕಾರಣಕ್ಕೆ ಉಂಟಾಗಿದ್ದ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
ವಿಧಾನ ಪರಿಷತ್ ನ ನಾಲ್ಕು ಕ್ಷೇತ್ರಗಳಿಗೆ ಜೂನ್ ನಲ್ಲಿ ನಡೆಯಲಿರುವ ಚುನಾವಣೆಗೆ ಬಿಜೆಪಿ ಏಪ್ರಿಲ್ ಮೊದಲ ವಾರದಲ್ಲಿ ಮೂರು ಕ್ಷೇತ್ರಗಳಿಗೆ ಅಧಿಕೃತ ಅಭ್ಯರ್ಥಿಗಳ ಹೆಸರು ಪ್ರಕಟಿಸಿ, ಹೊರಟ್ಟಿ ಪ್ರತಿನಿಧಿಸುವ ಪಶ್ಚಿಮ ಶಿಕ್ಷಕರ ಕ್ಷೇತ್ರವನ್ನು ಹಾಗೆಯೇ ಉಳಿಸಿಕೊಂಡಿತ್ತು.
ವಾಯುವ್ಯ ಶಿಕ್ಷಕರ, ಪದವೀಧರ ಕ್ಷೇತ್ರಗಳಿಗೆ ಹಾಲಿ ಸದಸ್ಯರಾದ ಅರುಣ್ ಶಹಾಪುರ, ಹನುಮಂತ ನಿರಾಣಿ, ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಂ.ವಿ.ರವಿಶಂಕರ್ ಹೆಸರನ್ನು ಅಂತಿಮಗೊಳಿಸಿತ್ತು.
ಉತ್ತರ ಕರ್ನಾಟಕವು ಬಿಜೆಪಿ ಬಾಹುಳ್ಯದ ಪ್ರದೇಶವಾಗಿ ಮಾರ್ಪಟ್ಟಿದ್ದರೂ ಪಶ್ಚಿಮ ಶಿಕ್ಷಕರ ಕ್ಷೇತ್ರದ ಮೇಲೆ ಹೊರಟ್ಟಿ ಪ್ರಬಲ ಹಿಡಿತವಿದ್ದು, ಪಕ್ಷೇತರ ಹಾಗೂ ಪಕ್ಷದ ಅಭ್ಯರ್ಥಿಯಾಗಿ ಏಳು ಬಾರಿ ಗೆಲ್ಲುವ ಮೂಲಕ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಹೊರಟ್ಟಿ ಉತ್ಸಾಹಕ್ಕೆ ರಾಜ್ಯ ಬಿಜೆಪಿಯ ಕೆಲ ನಾಯಕರು ಮಣೆ ಹಾಕಿದರೂ ವಯಸ್ಸು ಅಡ್ಡಿಯಾಗಲಿದೆ ಎಂಬ ಕೆಲವರ ಲೆಕ್ಕಾಚಾರವನ್ನು ಅಮಿತ್ ಷಾ ತಲೆಕೆಳಗು ಮಾಡಿದ್ದಾರೆ.