

ಬೆಂಗಳೂರು: ಕೇಂದ್ರ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಇಂದು ಬೆಳಗ್ಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಬಂದಿರುವ ಸಚಿವರನ್ನು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ವಾಗತಿಸಿದರು.
ರಾಜ್ಯ ಬಿಜೆಪಿಯಲ್ಲಿ ನಾಯಕತ್ವದ ಬದಲಾವಣೆ ಕುರಿತು ಸಾಕಷ್ಟು ಊಹಾಪೋಹ ಎದ್ದಿರುವ ಬೆನ್ನಲ್ಲಿ ಷಾ ಅವರ ಭೇಟಿ ರಾಜಕೀಯ ವಲಯದಲ್ಲಿ ಬಹಳ ಕುತೂಹಲ ಮೂಡಿಸಿದೆ. ಜತೆಗೆ ಬಿಜೆಪಿ ವಲಯದಲ್ಲಿಯೂ ತಳಮಳ ಮೂಡಿಸಿದೆ.
ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಅಮಿತ್ ಷಾ ನೇತೃತ್ವದಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಚಿವರಾದ ಆರ್ ಅಶೋಕ್, ಅರಗ ಜ್ಞಾನೆಂದ್ರ , ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಮತ್ತು ಇತರರು ಉಪಸ್ಥಿತರಿದ್ದರು.
ಬೆಂಗಳೂರಿನ ಬಸವೇಶ್ವರ ವೃತ್ತದಲ್ಲಿನ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಚಿವ ಅಮಿ ತ್ಷಾ ಅವರು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ನೃಪತುಂಗ ವಿಶ್ವವಿದ್ಯಾಲಯದ ನೂತನ ಶೈಕ್ಷಣಿಕ ಕಟ್ಟಡವನ್ನು ಉದ್ಘಾಟಿಸುವ ಮೂಲಕ ವಿಶ್ವವಿದ್ಯಾಲಯಕ್ಕೆ ಶಿಲಾನ್ಯಾಸ ನಡೆಸಲಿದ್ದು, ಬಳ್ಳಾರಿಯ ವಿಧಿವಿಜ್ಞಾನ ಪ್ರಯೋಗಾಲಯವನ್ನು ವರ್ಚ್ಯುಯಲ್ ಆಗಿ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನಿವಾಸದಲ್ಲಿ ಗೌರವಾರ್ಥವಾಗಿ ಆಯೋಜಿಸಲಾಗಿರುವ ಭೋಜನ ಕೂಟದಲ್ಲಿ ಸಚಿವ ಷಾ ಭಾಗವಹಿಸಲಿದ್ದಾರೆ.