ವಿದ್ಯುತ್​ ಸಂಪರ್ಕ ಕಲ್ಪಿಸಲು ಲಂಚಕ್ಕೆ ಬೇಡಿಕೆಯಿಟ್ಟು ಎಸಿಬಿ ಬಲೆಗೆ ಬಿದ್ದ ಬೆಂಗಳೂರಿನ ಇಂಜಿನಿಯರ್​

bribe
Published on

ಬೆಂಗಳೂರು: ಅಪಾರ್ಟ್‌ಮೆಂಟ್‌ಯೊಂದಕ್ಕೆ ವಿದ್ಯುತ್ ಸಂಪರ್ಕ ನೀಡಲು ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ವೇಳೆ ಸಹಾಯಕ ಇಂಜಿನಿಯರ್ (ಎಇ) ಒಬ್ಬರನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹನುಮಂತಪ್ಪ ಬಂಧಿತ ಆರೋಪಿ. ಭ್ರಷ್ಟಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಇವರಿಂದ 1.3 ಲಕ್ಷ ರೂಪಾಯಿ ನಗದನ್ನು ಜಪ್ತಿ ಮಾಡಿಕೊಂಡಿದ್ದಾರೆ.

ಇವರ ವಿರುದ್ಧ ಬೆಂಗಳೂರಿನ ನಿವಾಸಿಯೊಬ್ಬರು ದೂರು ದಾಖಲಿಸಿದ್ದರು. ತಾವು ಬೆನ್ಸ್‌ನ್ ಟೌನ್ ಮಾರಪ್ಪ ಗಾರ್ಡನ್‌ನಲ್ಲಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗೆ ವಿದ್ಯುತ್ ಸಂಪರ್ಕ ಪಡೆಯುವ ಸಲುವಾಗಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಲಂಚ ಕೇಳಿರುವುದಾಗಿ ಇವರು ಆರೋಪಿಸಿದ್ದರು.

ತಮ್ಮ ಅಪಾರ್ಟ್​ಮೆಂಟ್​ಗೆ ಪರಿಚಯವಿದ್ದ ಆರ್.ಟಿ ನಗರದ ವಿದ್ಯುತ್‌ಗುತ್ತಿಗೆದಾರ ಮೂಲಕ ಆನ್‌ಲೈನ್ ಮೂಲಕ ದೂರುದಾರರು ಅರ್ಜಿ ಸಲ್ಲಿಸಿದ್ದರು. ನಂತರ ಅರ್ಜಿಯ ಕುರಿತಂತೆ ಬೆನ್ಸ್‌ನ್‌ಟೌನ್‌ನಲ್ಲಿರುವ ಓಆ್ಯಂಡ್‌ಎಂ ಕಚೇರಿಯಲ್ಲಿ ಸಹಾಯಕ ಇಂಜಿನಿಯರ್​ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಹನುಮಂತಪ್ಪ ಅವರನ್ನು ಭೇಟಿ ಮಾಡಿ ಈ ಬಗ್ಗೆ ವಿಚಾರಿಸಿದ್ದಾರೆ.

ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಎಇ ಪ್ರಾರಂಭದಲ್ಲಿ 3 ಲಕ್ಷ ರೂ. ಗೆ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂತರ 1.60 ಲಕ್ಷ ರೂಪಾಯಿಗೆ ಒತ್ತಾಯಿಸಿದ್ದಾರೆ. ಈ ಬಗ್ಗೆ ದೂರು ದಾಖಲಾಗಿತ್ತು. ನಂತರ ಹಣವನ್ನು ನೀಡುವಾಗ ಮೊದಲೇ ಮಾಡಿರುವ ಯೋಜನೆಯಂತೆ ಹನುಮಂತಪ್ಪ ಸಿಕ್ಕಿಬಿದ್ದಿದ್ದಾರೆ. ದೂರುದಾರರಿಂದ 1.3 ಲಕ್ಷ ರೂ. ಹಣ ಪಡೆಯುತ್ತಿರುವಾಗ ಕಾರ್ಯಾಚರಣೆ ನಡೆಸಿದ ಎಸಿಬಿ ಅಧಿಕಾರಿಗಳು ಸಾಕ್ಷಿ ಸಮೇತ ಆರೋಪಿಯನ್ನು ಬಂಧಿಸಿ ಹಣವನ್ನು ಜಪ್ತಿ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net